ನಾನು ಭಯೋತ್ಪಾದನೆ, ಬಡತನ ನಿರ್ಮೂಲನೆಗೆ ಪ್ರಯತ್ನಿಸುತ್ತಿದ್ದೇನೆ: ಪ್ರಧಾನಿ

Update: 2019-03-06 17:23 GMT

ಕಲುಬುರ್ಗಿ, ಮಾ. 6: ಪ್ರತಿಪಕ್ಷ ನನ್ನನ್ನು ಅಧಿಕಾರದಿಂದ ಕಿತ್ತೊಗೆಯಲು ಪ್ರಯತ್ನಿಸುತ್ತಿರುವಾಗ ನಾನು ಭಯೋತ್ಪಾದನೆ, ಬಡತನ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಯತ್ನಿಸುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ. “125 ಕೋಟಿ ಜನರ ಆಶೀರ್ವಾದ ಇರುವ ವ್ಯಕ್ತಿ...ಯಾರೊಬ್ಬರ ಬಗ್ಗೆ ಯಾಕೆ ಭಯಪಡಬೇಕು ?, ಅವರು ಹಿಂದೂಸ್ಥಾನಿ, ಪಾಕಿಸ್ತಾನಿ, ಕಳ್ಳರು ಅಥವಾ ಅಪ್ರಾಮಾಣಿಕರು ಯಾರು ಬೇಕಾದರೂ ಆಗಿರಲಿ ?, ಭಯಪಡದಿರುವ ಶಕ್ತಿಯನ್ನು ಭಾರತ ಹಾಗೂ 125 ಕೋಟಿ ಜನರು ನನಗೆ ನೀಡಿದ್ದಾರೆ” ಎಂದು ಮೋದಿ ಅವರು ಇಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದರು.

ಫೆಬ್ರವರಿ 26ರಂದು ಭಾರತೀಯ ವಾಯು ಪಡೆ ಪಾಕಿಸ್ತಾನದ ಬಾಲಕೋಟ್‌ನ ಭಯೋತ್ಪಾದಕರ ಶಿಬಿರದ ಮೇಲೆ ದಾಳಿ ನಡೆಸಿರುವುದನ್ನು ಉಲ್ಲೇಖಿಸಿ ಮೋದಿ, ಹೊಸ ರೀತಿಯ ಧೈರ್ಯಕ್ಕೆ ಜಗತ್ತು ಸಾಕ್ಷಿಯಾಗುತ್ತಿದೆ. ಇದು ಮೋದಿಯದ್ದಲ್ಲ, 125 ಕೋಟಿ ಜನರದ್ದು ಎಂದರು.

ಮಹಾಮೈತ್ರಿಯನ್ನು ಮಹಾ ಮಿಲಾವಟ್ (ಮಹಾ ಕಲಬೆರಕೆ) ಎಂದು ಕರೆದ ಅವರು, ದೇಶ ಬಲಿಷ್ಠ ಸರಕಾರವನ್ನು ಬಯಸುತ್ತಿದೆ ಎಂದರು. ಕರ್ನಾಟಕದಲ್ಲಿ ಅಸಹಾಯಕ ಸರಕಾರವಿದೆ. ಎಚ್.ಡಿ. ಕುಮಾರ ಸ್ವಾಮಿ ಅವರು ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಜನರಿಗೆ ಹಿಂದಿನಿಂದ ಇರಿದು ಅಧಿಕಾರಕ್ಕೆ ಬಂದಿದೆ ಎಂದು ಅವರು ಆರೋಪಿಸಿದರು. ರಾಜ್ಯ ಸರಕಾರ ರೈತರಿಗೆ ಅನ್ಯಾಯ ಎಸಗುತ್ತಿದೆ ಎಂದು ಹೇಳಿದ ಅವರು, ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರಕಾರ ಸಹಕಾರ ನೀಡುತ್ತಿಲ್ಲ ಎಂದರು. ಒಂದು ವೇಳೆ ರಾಜ್ಯ ಸರಕಾರ ಗೋಡೆಯನ್ನು ಸೃಷ್ಟಿಸಿದರೆ, ರಾಜ್ಯ ರೈತರು ಅದನ್ನು ಕೆಡವಲಿದ್ದಾರೆ ಎಂದು ಮೋದಿ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News