×
Ad

ಭಾರತ ತಂಡಕ್ಕೆ ಮನ್‌ಪ್ರೀತ್ ನಾಯಕ

Update: 2019-03-06 23:47 IST

ಹೊಸದಿಲ್ಲಿ, ಮಾ.6: ಮಲೇಶ್ಯದಲ್ಲಿ ನಡೆಯಲಿರುವ 28ನೇ ಅಝ್ಲನ್ ಶಾ ಕಪ್ ಹಾಕಿ ಪಂದ್ಯಾವಳಿಗೆ ಮಿಡ್‌ಫೀಲ್ಡರ್ ಮನ್‌ಪ್ರೀತ್ ಸಿಂಗ್ ನೇತೃತ್ವದ 18 ಬಹುತೇಕ ಯುವ ಆಟಗಾರರ ತಂಡವನ್ನು ಬುಧವಾರ ಹೆಸರಿಸಲಾಗಿದೆ. ಗಾಯದ ಕಾರಣದಿಂದ ಹಲವು ಪ್ರಮುಖ ಆಟಗಾರರು ಟೂರ್ನಿಯಿಂದ ಹೊರಗುಳಿದಿದ್ದಾರೆ.

ಮಲೇಶ್ಯದ ಇಪೊಹ್‌ನಲ್ಲಿ ಮಾ.23ರಿಂದ 30ರವರೆಗೆ ನಡೆಯಲಿರುವ ಈ ವರ್ಷದ ಟೂರ್ನಿಗೆ ಭಾರತ ತಂಡದ ಉಪನಾಯಕನಾಗಿರುವ ರಕ್ಷಣಾ ಆಟಗಾರ ಸುರೇಂದರ್ ನಾಯಕ ಮನ್‌ಪ್ರೀತ್‌ಗೆ ಸಹಾಯ ಮಾಡಲಿದ್ದಾರೆ. ಭಾರತ ತಂಡವನ್ನು ಹೊರತುಪಡಿಸಿ ಆತಿಥೇಯ ಮಲೇಶ್ಯ, ಕೆನಡ, ಕೊರಿಯ, ದ.ಆಫ್ರಿಕ, ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಜಪಾನ್ ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿವೆ.

ಮಾ.23ರಂದು ಭಾರತ ತನ್ನ ಮೊದಲ ಪಂದ್ಯವನ್ನು ಜಪಾನ್ ವಿರುದ್ಧ ಆಡಲಿದೆ. ಎಲ್ಲ ಗಾಯಾಳು ಆಟಗಾರರು ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ ದಕ್ಷಿಣ ಕೇಂದ್ರದಲ್ಲಿ ಫಿಟ್ ಆಗುವವರೆಗೆ ಇರಲಿದ್ದಾರೆ.

18 ಸದಸ್ಯರಲ್ಲ್ಲಿ ಅನುಭವಿ ಆಟಗಾರರಾದ ಪಿ.ಆರ್.ಶ್ರೀಜೇಶ್, ಕೃಷ್ಣನ್ ಬಿ.ಪಾಠಕ್ ಗೋಲ್‌ಕೀಪರ್ ಸ್ಥಾನ ನಿಭಾಯಿಸಲಿದ್ದಾರೆ. ಉಪನಾಯಕ ಸುರೇಂದರ್, ಗುರೀಂದರ್‌ಸಿಂಗ್, ಬೀರೇಂದ್ರ ಲಾಕ್ರಾ, ಕೋತಜಿತ್ ಸಿಂಗ್ ಖದಂಗ್‌ಬಾಮ್ ಹಾಗೂ ಡ್ರಾಗ್‌ಫ್ಲಿಕ್ ಜೋಡಿಯಾದ ವರುಣ್‌ಕುಮಾರ್ ಹಾಗೂ ಅಮಿತ್ ರೋಹಿದಾಸ್ ತಂಡದಲ್ಲಿ ರಕ್ಷಣಾ ಆಟಗಾರರರಾಗಿ ಸಾಮರ್ಥ್ಯ ತೋರಲಿದ್ದಾರೆ. ಯುವ ಆಟಗಾರರಾದ ವಿವೇಕ್ ಸಾಗರ್ ಪ್ರಸಾದ್, ಹಾರ್ದಿಕ್ ಸಿಂಗ್, ಸುಮಿತ್ ಹಾಗೂ ನೀಲಕಂಠ ಶರ್ಮಾರಂತಹ ಯುವ ಆಟಗಾರರೊಂದಿಗೆ ಮನ್‌ಪ್ರೀತ್ ಮಿಡ್‌ಫೀಲ್ಡ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಮಂದೀಪ್‌ಸಿಂಗ್, ಸಿಮ್ರನ್‌ಜೀತ್ ಸಿಂಗ್, ಗುರ್ಜಂತ್‌ಸಿಂಗ್, ಶಿಲಾನಂದ ಲಾಕ್ರಾ ಹಾಗೂ ಸುಮಿತ್‌ಕುಮಾರ್ ಮುನ್ಪಡೆಯಲ್ಲಿ ಸ್ಥಾನ ಪಡೆದಿದ್ದಾರೆ.

ಕಳೆದ ವರ್ಷ ನಡೆದ ವಿಶ್ವಕಪ್ ಹಾಕಿಯಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ಸೋಲು ಅನುಭವಿಸಿದ ಬಳಿಕ ಕೋಚ್ ಹರೇಂದ್ರಸಿಂಗ್ ಅವರನ್ನು ಹುದ್ದೆಯಿಂದ ಕಿತ್ತುಹಾಕಲಾಗಿದೆ. ಅಂದಿನಿಂದ ತಂಡದ ಕೋಚ್ ಹುದೆ ಖಾಲಿಯಾಗಿಯೇ ಇದೆ.

ಮಾ.18ರಂದು ಮಲೇಶ್ಯದ ಇಪೊಹ್‌ಗೆ ಭಾರತ ತಂಡ ಬೆಂಗಳೂರಿನ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಲಿದೆ.

► ಗಾಯದ ಸಮಸ್ಯೆ: ಪ್ರಮುಖ ಆಟಗಾರರು ಅಲಭ್ಯ

ಅನುಭವಿ ಮುನ್ಪಡೆ ಆಟಗಾರರಾದ ಎಸ್.ವಿ. ಸುನೀಲ್, ಆಕಾಶದೀಪ್‌ಸಿಂಗ್, ರಮಣ್‌ದೀಪ್ ಸಿಂಗ್, ಲಲಿತ್ ಉಪಾಧ್ಯಾಯ, ರಕ್ಷಣಾ ಆಟಗಾರರಾದ ರೂಪಿಂದರ್ ಪಾಲ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್ ಹಾಗೂ ಮಿಡ್‌ಫೀಲ್ಡರ್ ಚಿಂಗ್ಲೆಸನಾ ಸಿಂಗ್ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಇಬ್ಬರು ಕಿರಿಯ ಆಟಗಾರರಾದ ವಿಶಾಲ್ ಅಂಟಿಲ್ ಹಾಗೂ ಪರ್ದೀಪ್ ಸಿಂಗ್ ಕೂಡ ಗಾಯದ ಕಾರಣ ಟೂರ್ನಿಗೆ ಅಲಭ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News