26ನೇ ವಯಸ್ಸಿನಲ್ಲೇ ನಿವೃತ್ತಿಯಾದ ಮಾಜಿ ವಿಶ್ವ ಚಾಂಪಿಯನ್ ಈಜುಪಟು ನಿಂಗ್!
ಶಾಂಗೈ, ಮಾ.6: ಚೀನಾದ ಮಾಜಿ 100 ಮೀ. ಫ್ರೀಸ್ಟೈಲ್ ವಿಶ್ವ ಚಾಂಪಿಯನ್ ಈಜುಪಟು ನಿಂಗ್ ಝೆಟಾವೊ ತಮ್ಮ 26ನೇ ಜನ್ಮದಿನವಾದ ಬುಧವಾರ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
ಚೀನಾ ಕ್ರೀಡಾಭಿಮಾನಿಗಳ ಅಚ್ಚುಮೆಚ್ಚಿನ ಆಟಗಾರ ನಾಗಿರುವ ನಿಂಗ್, 2015ರಲ್ಲಿ 100 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು. ಅವರು ಏಶ್ಯನ್ ಗೇಮ್ಸ್‌ನಲ್ಲಿ ನಾಲ್ಕು ಬಾರಿ ಬಂಗಾರದ ಪದಕ ವಿಜೇತರೂ ಆಗಿದ್ದಾರೆ.
2011ರಲ್ಲಿ ಉದ್ದೀಪನ ಮದ್ದು ಸೇವನೆ ಆರೋಪದಲ್ಲಿ 1 ವರ್ಷ ಅಮಾನತು ಶಿಕ್ಷೆಗೆ ಒಳಗಾಗಿದ್ದ ಅವರು, ಚೀನಾದಲ್ಲಿ ಟ್ವಿಟರ್‌ಗೆ ಸಮಾನವಾದ ಸಾಮಾಜಿಕ ಜಾಲತಾಣ ವೈಬೊನಲ್ಲಿ ತಮ್ಮ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ವಿಶ್ವ ಚಾಂಪಿಯನ್ ಪಟ್ಟ ಧರಿಸಿದ ಬಳಿಕ ವರ್ಣರಂಜಿತ ವ್ಯಕ್ತಿತ್ವದ ನಿಂಗ್, ಒಲಿಂಪಿಕ್ಸ್‌ನಲ್ಲಿ ಮಿಂಚಲು ತಯಾರಿ ನಡೆಸಿದರು. ಆದರೆ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ 100 ಮೀ. ಫ್ರೀಸ್ಟೈಲ್‌ನ ಫೈನಲ್‌ಗೆ ಅರ್ಹತೆ ಗಳಿಸಲು ವಿಫಲರಾಗಿ ನಿರಾಶೆ ಅನುಭವಿಸಿದ್ದರು.
2017ರ ಫೆಬ್ರವರಿಯಲ್ಲಿ ಸೆನ್ಸಾರ್ ನಿಯಮಗಳನ್ನು ಉಲ್ಲಂಘಿಸಿದ ಆಪಾದನೆಯ ಮೇರೆಗೆ ಚೀನಾ ತಂಡದಿಂದ ಹೊರದಬ್ಬಿಸಿಕೊಂಡಿದ್ದರು.