ಲೋಕಸಭಾ ಚುನಾವಣೆಯ ವೇಳೆ ಹಿಂಸಾಚಾರ ಹೆಚ್ಚಬಹುದು: ಮಾಜಿ ಮುಖ್ಯ ಚು.ಆಯುಕ್ತ
ಹೈದರಾಬಾದ್,ಮಾ.8: ಸದ್ಯ ರಾಜಕೀಯ ಪಕ್ಷಗಳು ಪರಸ್ಪರ ಹೋರಾಡುತ್ತಿರುವುದನ್ನು ಗಮನಿಸಿದಾಗ ಈ ಬಾರಿ ಲೋಕಸಭಾ ಚುನಾವಣೆ ಹೆಚ್ಚಿನ ಹಣ, ದ್ವೇಷ ಮತ್ತು ಹಿಂಸೆಗೆ ಸಾಕ್ಷಿಯಾಗಲಿದೆ ಎಂಬ ಭಾವನೆ ಮೂಡುತ್ತದೆ ಎಂದು ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಟಿ.ಎಸ್ ಕೃಷ್ಣಮೂರ್ತಿ ಶುಕ್ರವಾರ ಅಭಿಪ್ರಾಯಿಸಿದ್ದಾರೆ.
2004ರ ಲೋಕಸಭಾ ಚುನಾವಣೆಯ ಮೇಲುಸ್ತುವಾರಿ ನೋಡಿಕೊಂಡಿದ್ದ ಕೃಷ್ಣಮೂರ್ತಿ, ಚುನಾವಣಾ ಆಯೋಗ ಮುಂದಿನ ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸಲು ವಿಳಂಬ ಮಾಡುತ್ತಿದೆ ಎಂಬ ವಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ್ದಾರೆ. ರಾಜಕೀಯ ಪಕ್ಷಗಳು ಸದ್ಯ ಪರಸ್ಪರರ ವಿರುದ್ಧ ನಡೆಸುತ್ತಿರುವ ವಾಗ್ದಾಳಿಗಳನ್ನು ಕಂಡಾಗ ಚುನಾವಣೆಯ ಸಂದರ್ಭದಲ್ಲಿ ಹೆಚ್ಚು ಕ್ಲಿಷ್ಟಕರ ಪರಿಸ್ಥಿತಿ ಎದುರಾಗಬಹುದು. ಇಂಥ ಪರಿಸ್ಥಿತಿಯಲ್ಲಿ ಚುನಾವಣಾ ಆಯೋಗದ ಮುಂದೆ ಇರುವ ಬಹುದೊಡ್ಡ ಸವಾಲೆಂದರೆ ನೀತಿ ಸಂಹಿತೆಯನ್ನು ಜಾರಿಗೆ ತರುವುದು. ಆದರೆ ಆಯೋಗ ಈ ಸವಾಲನ್ನ್ನು ನಿಭಾಯಿಸಲು ಸಮರ್ಥವಾಗಿದೆ ಎಂದು ಮೂರ್ತಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆ ಬಗ್ಗೆ ವಿಪಕ್ಷಗಳು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಮೂರ್ತಿ, ವಿವಿಧ ರಾಜ್ಯಗಳ ಪರಿಸ್ಥಿತಿಯನ್ನು ಪರಿಗಣಿಸಬೇಕಿರುವುದರಿಂದ ಚುನಾವಣೆಯ ದಿನಾಂಕವನ್ನು ನಿಗದಿಪಡಿಸುವಲ್ಲಿ ವಿಳಂಬವಾಗುವುದು ಸಹಜ. ಸಂಸ್ಥೆಗಳು ತಮ್ಮ ಪಾಡಿಗೆ ಕೆಲಸ ಮಾಡಲು ಬಿಡಬೇಕು. ಅವುಗಳು ತಮ್ಮ ಕೆಲಸ ಮಾಡುವವರೆಗೆ ಪ್ರಶ್ನಿಸುವುದರಲ್ಲಿ ಅರ್ಥವಿಲ್ಲ ಎಂದು ತಿಳಿಸಿದ್ದಾರೆ.