×
Ad

ಜಮ್ಮು ಸ್ಫೋಟ ಪ್ರಕರಣ: ಟಿಫಿನ್‌ ಬಾಕ್ಸ್ ‌ನಲ್ಲಿ ಗ್ರೆನೇಡ್ ಇರಿಸಿಕೊಂಡಿದ್ದ ವಿದ್ಯಾರ್ಥಿ

Update: 2019-03-08 22:11 IST

ಶ್ರೀನಗರ, ಮಾ.8: ಗುರುವಾರ ಜಮ್ಮುವಿನ ಬಸ್ಸು ನಿಲ್ದಾಣದ ಮೇಲೆ ಗ್ರೆನೇಡ್ ಎಸೆದಿದ್ದ 9ನೇ ತರಗತಿಯ ವಿದ್ಯಾರ್ಥಿ, ತನ್ನ ಟಿಫಿನ್ ಬಾಕ್ಸ್‌ನಲ್ಲಿ ಅನ್ನದ ಕೆಳಗೆ ಗ್ರೆನೇಡನ್ನು ಇರಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಜಮ್ಮುವಿನಲ್ಲಿ ಜನಸಂದಣಿಯ ಪ್ರದೇಶದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ನಿಂದ ಬಾಂಬ್ ಸ್ಫೋಟ ನಡೆಯುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ನೀಡಿದ್ದ ಮಾಹಿತಿಯ ಹಿನ್ನೆಲೆಯಲ್ಲಿ ಕ್ಷಿಪ್ರವಾಗಿ ತನಿಖೆ ನಡೆಸಿದ ಪೊಲೀಸರಿಗೆ ಘಟನೆ ನಡೆದ ಗಂಟೆಯೊಳಗೆ ಆರೋಪಿ 15 ವರ್ಷದ ವಿದ್ಯಾರ್ಥಿಯನ್ನು ಪತ್ತೆಹಚ್ಚಲು ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಬಸ್ ನಿಲ್ದಾಣದ ಮೇಲೆ ಗ್ರೆನೇಡ್ ಎಸೆದ ವಿದ್ಯಾರ್ಥಿಯನ್ನು ಜಮ್ಮುವಿನಿಂದ 20 ಕಿ.ಮೀ. ದೂರದ ನಗ್ರೋಟ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತ ಯೂಟ್ಯೂಬ್‌ನ ವೀಡಿಯೊವನ್ನು ಗಮನಿಸಿ ಗ್ರೆನೇಡ್ ಸ್ಫೋಟಿಸುವ ಬಗ್ಗೆ ಸ್ವಯಂ ಕಲಿತುಕೊಂಡಿದ್ದ ಎಂದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಖಾಸಗಿ ಕಾರಿನಲ್ಲಿ ಈತ ಜಮ್ಮುವಿಗೆ ಆಗಮಿಸಿದ್ದು, ಕಾರಿನ ಡ್ರೈವರ್ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಶ್ರೀನಗರ- ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಬುಧವಾರ ಏಕಮುಖ ಸಂಚಾರಕ್ಕೆ ಮುಕ್ತವಾಗಿಸಲಾಗಿತ್ತು. ಆದರೆ ಈ ಬಾಲಕ ಪ್ರಯಾಣಿಸುತ್ತಿದ್ದ ಕಾರು ವಿರುದ್ಧ ದಿಕ್ಕಿನಿಂದ ಈ ಹೆದ್ದಾರಿಯಲ್ಲಿ ಸುಮಾರು 250 ಕಿ.ಮೀ. ದೂರ ಯಾವುದೇ ಅಡೆತಡೆಯಿಲ್ಲದೆ ಸಾಗಿರುವ ಬಗ್ಗೆ ಪ್ರಶ್ನೆ ಮೂಡಿದೆ. ಈ ದಾಳಿಯಲ್ಲಿ ಹಿಝ್‌ಬುಲ್ ಮುಜಾಹಿದ್ದೀನ್ ಸಂಘಟನೆಯ ಕೈವಾಡವಿದೆ ಮತ್ತು ಸಂಘಟನೆಯ ಕುಲ್‌ಗಾಂವ್ ವಿಭಾಗದ ಮುಖ್ಯಸ್ಥ ಫಾರೂಕ್ ಅಹ್ಮದ್ ಭಟ್ಟ್ ವಿದ್ಯಾರ್ಥಿಯನ್ನು ಘಟನಾ ಸ್ಥಳಕ್ಕೆ ಕಾರಿನಲ್ಲಿ ಕರೆದೊಯ್ದಿರುವ ಬಗ್ಗೆ ಮಾಹಿತಿಯಿದೆ ಎಂದು ಜಮ್ಮು ಐಜಿಪಿ ಎಂಕೆ ಸಿನ್ಹಾ ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿಯೇ ಓರ್ವ ಮೃತಪಟ್ಟಿದ್ದು ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ವ್ಯಕ್ತಿ ಶುಕ್ರವಾರ ಬೆಳಿಗ್ಗೆ ಆಸ್ಪತೆಯಲ್ಲಿ ಮೃತನಾಗಿದ್ದಾನೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News