ಶ್ರೀಮಂತ ಪ್ರಾದೇಶಿಕ ಪಕ್ಷಗಳ ಪಟ್ಟಿ: ಸಮಾಜವಾದಿ ಪಕ್ಷಕ್ಕೆ ಅಗ್ರಸ್ಥಾನ, ಡಿಎಂಕೆ ದ್ವಿತೀಯ

Update: 2019-03-08 16:44 GMT

ಹೊಸದಿಲ್ಲಿ, ಮಾ.8: ದೇಶದ 37 ಪ್ರಾದೇಶಿಕ ಪಕ್ಷಗಳಲ್ಲಿ ಸಮಾಜವಾದಿ ಪಕ್ಷ ಅತ್ಯಂತ ಶ್ರೀಮಂತ ಪಕ್ಷವಾಗಿದ್ದರೆ, ಡಿಎಂಕೆ ಮತ್ತು ಟಿಆರ್‌ಎಸ್ ಆ ಬಳಿಕದ ಸ್ಥಾನದಲ್ಲಿವೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಾಟಿಕ್ ರಿಫಾರ್ಮ್ಸ್(ಎಡಿಆರ್)ನ ವರದಿ ತಿಳಿಸಿದೆ. 2017-18ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿ 37 ಪ್ರಾದೇಶಿಕ ಪಕ್ಷಗಳ ಆದಾಯ ಮತ್ತು ವೆಚ್ಚವನ್ನು ಪರಿಶೀಲಿಸಿದ ಬಳಿಕ ಈ ವರದಿ ತಯಾರಿಸಲಾಗಿದೆ.

2017-18ರ ಸಾಲಿನಲ್ಲಿ 37 ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯ 237.27 ಕೋಟಿ ರೂ. ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಒಟ್ಟು ಆದಾಯದ ಶೇ.19.89ರಷ್ಟು ಆದಾಯವನ್ನು (47.19 ಕೋಟಿ ರೂ.)ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಘೋಷಿಸಿದೆ. ಡಿಎಂಕೆ 35.74 ಕೋಟಿ ರೂ, ಟಿಆರ್‌ಎಸ್ 27.27 ಕೋಟಿ ರೂ , ವೈಎಸ್‌ಆರ್ ಕಾಂಗ್ರೆಸ್ 13.30 ಕೋಟಿ ರೂ. ಆದಾಯ ಘೋಷಿಸಿದೆ. ಉಳಿದ 34 ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯ 2016-17ರಲ್ಲಿ 409.64 ಕೋಟಿ ರೂ. ಆಗಿದ್ದರೆ ಇದು 2017-18ರ ವೇಳೆಗೆ 236.86 ಕೋಟಿ ರೂ.ಗೆ ಇಳಿದಿದೆ(ಶೆ.42ರಷ್ಟು ಕುಸಿತ).

ಇದೇ ವೇಳೆ ಈ 34 ಪಕ್ಷಗಳ ಒಟ್ಟು ವೆಚ್ಚ 2017-18ರಲ್ಲಿ 170.02 ಕೋಟಿ ರೂ. ಆಗಿದೆ. 48 ಪ್ರಾದೇಶಿಕ ಪಕ್ಷಗಳಲ್ಲಿ 37 ಪಕ್ಷಗಳ ಲೆಕ್ಕಪತ್ರ ಪರಿಶೋಧನೆ ವರದಿ(ಆಡಿಟ್ ರಿಪೋರ್ಟ್)ಯನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ. ಉಳಿದ 11 ಪಕ್ಷಗಳ ಆಡಿಟ್ ರಿಪೋರ್ಟ್ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ ಎಂದು ಎಡಿಆರ್ ತಿಳಿಸಿದೆ. ಈ 11 ಪಕ್ಷಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್ ಸೇರಿದೆ. ಅನುದಾನ, ಕೊಡುಗೆ, ದೇಣಿಗೆ, ಸದಸ್ಯತನ ಶುಲ್ಕ, ಚಂದಾ, ಬಡ್ಡಿ ಆದಾಯ ಇವು ಆದಾಯದ ಮುಖ್ಯ ಮೂಲಗಳಾಗಿದ್ದರೆ, ಚುನಾವಣಾ ವೆಚ್ಚ, ನಿರ್ವಹಣೆ ಹಾಗೂ ಇತರ ಸಾಮಾನ್ಯ ಖರ್ಚಗಳು ವೆಚ್ಚದ ಮೂಲಗಳಾಗಿವೆ.

37 ಪ್ರಾದೇಶಿಕ ಪಕ್ಷಗಳು ತಮ್ಮ ಒಟ್ಟು ಆದಾಯದಲ್ಲಿ ಶೇ.32.58ರಷ್ಟನ್ನು (77.30 ಕೋಟಿ ರೂ.) ಸ್ವಯಂಪ್ರೇರಿತ ಕೊಡುಗೆ ರೂಪದಲ್ಲಿ, ಶೇ.36.50ರಷ್ಟನ್ನು (86.60 ಕೋಟಿ ರೂ.) ಸದಸ್ಯತನ ಶುಲ್ಕದ ರೂಪದಲ್ಲಿ ಸಂಗ್ರಹಿಸಿರುವುದಾಗಿ ತಿಳಿಸಿವೆ. 37 ಪ್ರಾದೇಶಿಕ ಪಕ್ಷಗಳಲ್ಲಿ 15 ಪಕ್ಷವು 2016-17ಕ್ಕಿಂತ 2017-18ರಲ್ಲಿ ಕಡಿಮೆ ಆದಾಯ ಘೋಷಿಸಿದ್ದರೆ 19 ಪಕ್ಷಗಳು ಹೆಚ್ಚಿನ ಆದಾಯ ಘೋಷಿಸಿವೆ. ಎಜೆಎಸ್‌ಯು(ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್), ಎಐಎಫ್‌ಬಿ(ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್) ಹಾಗೂ ಜೆಕೆಎನ್‌ಪಿಪಿ(ಜಮ್ಮು-ಕಾಶ್ಮೀರ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿ) 2016-17ರ ವಿತ್ತ ವರ್ಷಕ್ಕೆ ಸಂಬಂಧಿಸಿದ ಆದಾಯ ತೆರಿಗೆ ರಿಟರ್ನ್ಸ್ ಅನ್ನೂ ಚುನಾವಣಾ ಆಯೋಗಕ್ಕೆ ಇನ್ನೂ ಸಲ್ಲಿಸಿಲ್ಲ.

    ಸಮಾಜವಾದಿ ಪಕ್ಷ, ಡಿಎಂಕೆ ಮತ್ತು ಟಿಆರ್‌ಎಸ್ , ಬಿಜು ಜನತಾ ದಳ ಮತ್ತು ಜೆಡಿ-ಯು 2017-18ರ ಸಾಲಿನಲ್ಲಿ ಆದಾಯ ಮೀರಿ ಖರ್ಚು ಮಾಡಿವೆ. ಸಮಾಜವಾದಿ ಪಕ್ಷ 34.53 ಕೋಟಿ ರೂ, ಡಿಎಂಕೆ 27.47 ಕೋಟಿ ರೂ. ಮತ್ತು ಟಿಆರ್‌ಎಸ್ 16.73 ಕೋಟಿ ರೂ. ಖರ್ಚು ಮಾಡಿರುವುದಾಗಿ ಘೋಷಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News