×
Ad

ಪರಿಸರ ಸ್ನೇಹಿ ನ್ಯಾಪ್‌ಕಿನ್ ತಯಾರಿಸಿದ ‘ಪ್ಯಾಡ್‌ವುಮನ್’ ಪ್ರೀತಿ

Update: 2019-03-08 22:23 IST

 ಚೆನ್ನೈ, ಮಾ.8: ನವೀನ ಮಾದರಿಯ ಪ್ಲಾಸ್ಟಿಕ್ ರಹಿತ, ಜೈವಿಕ ವಿಘಟನೀಯ ಸ್ಯಾನಿಟರಿ ನ್ಯಾಪ್‌ಕಿನ್ ತಯಾರಿಸಿರುವ ತಮಿಳುನಾಡಿನ ‘ಪ್ಯಾಡ್‌ವುಮನ್’ ಎಂದೇ ಖ್ಯಾತರಾಗಿರುವ ಪ್ರೀತಿ ರಾಮದಾಸ್ ಅವರು ಚೆನ್ನೈಯ ಅಣ್ಣಾ ವಿವಿಯಿಂದ ಪಿಎಚ್‌ಡಿ ಪದವಿ ಪಡೆದವರು.

ತಾವು ತಯಾರಿಸುವ ಪರಿಸರ ಸ್ನೇಹಿ ನ್ಯಾಪ್‌ಕಿನ್‌ಗಳು ಒಂದು ತಿಂಗಳೊಳಗೆ ಸಂಪೂರ್ಣವಾಗಿ ವಿಘಟಿತವಾಗುತ್ತದೆ ಎನ್ನುವ ಪ್ರೀತಿ, ಈ ವಿಷಯದಲ್ಲೇ ಅಧ್ಯಯನ ನಡೆಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಾರುಕಟ್ಟೆಯಲ್ಲಿ ದೊರೆಯುವ ನ್ಯಾಪ್‌ಕಿನ್‌ಗಳಲ್ಲಿ ಪ್ಲಾಸ್ಟಿಕ್ ಅಲ್ಲದೆ ಮರದ ತಿರುಳನ್ನೂ ಬಳಸಲಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯೂ ತನ್ನ ಋತುಮತಿಯಾಗುವ ಅವಧಿಯಲ್ಲಿ ಕನಿಷ್ಟ ಎರಡು ಮರಗಳ ಸಾವಿಗೆ ಪರೋಕ್ಷವಾಗಿ ಕಾರಣಳಾಗುತ್ತಿದ್ದಾಳೆ. ಈ ಅಂಶವನ್ನು ಗಮನಿಸಿ ಪರಿಸರ ಸ್ನೇಹಿ ನ್ಯಾಪ್‌ಕಿನ್ ತಯಾರಿಯನ್ನು ಆಧಾರವಾಗಿಟ್ಟುಕೊಂಡು ಪಿಎಚ್‌ಡಿ ಅಧ್ಯಯನ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ. ತಾವು ಉತ್ಪಾದಿಸುವ ನ್ಯಾಪ್‌ಕಿನ್‌ಗಳಿಗೆ ಸೆಲ್ಯುಲೋಸ್ ಉತ್ಪನ್ನಗಳನ್ನು ಬಳಸಲಾಗುತ್ತದೆ. ಸಸಿಗಳಿಂದ ಪಡೆದ ಕಚ್ಚಾ ವಸ್ತುಗಳನ್ನು ಹಾಗೂ ಪಾಲಿಮರ್‌ಗಳನ್ನು ಬಳಸಿ ನ್ಯಾಪ್‌ಕಿನ್ ತಯಾರಿಸಲಾಗುತ್ತದೆ. ಈ ನ್ಯಾಪ್‌ಕಿನ್‌ಗಳ ಗುಣಮಟ್ಟವನ್ನು ಅಣ್ಣಾ ವಿವಿಯ ‘ಕ್ರಿಸ್ಟಲ್ ಗ್ರೋತ್ ಸೆಂಟರ್’ನಲ್ಲಿ ಪರೀಕ್ಷಿಸಲಾಗಿದ್ದು, ಯಶಸ್ವಿಯಾಗಿದೆ.

ಇದೀಗ ಈ ನ್ಯಾಪ್‌ಕಿನ್‌ಗಳ ಉತ್ಪಾದನೆಗೆ ಆರ್ಥಿಕ ನೆರವನ್ನು ಎದುರು ನೋಡುತ್ತಿರುವುದಾಗಿ ವಿವಿಯ ಪ್ರೊ. ಡಾ. ಎಸ್ ಅರಿವೋಲಿ ಹೇಳಿದ್ದಾರೆ. ಈ ನ್ಯಾಪ್‌ಕಿನ್ ಪ್ಯಾಡ್‌ಗಳು ಮಾರುಕಟ್ಟೆಯಲ್ಲಿ ಇರುವ ಇತರ ನ್ಯಾಪ್‌ಕಿನ್‌ಗಳಿಗಿಂತ ಅಗ್ಗವಾಗಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News