ಕೇರಳದ ಪಾರಂಪರಿಕ ಗ್ರಂಥಾಲಯದಿಂದ ಮಹಿಳಾ ಓದುಗ ಬಳಗ ಆರಂಭ
ತಿರುವನಂತಪುರಂ, ಮಾ.8: ಕೇರಳದ 190 ವರ್ಷಗಳ ಇತಿಹಾಸವಿರುವ ಪುರಾತನ ಗ್ರಂಥಾಲಯವೊಂದು, ಮಹಿಳೆಯರ ವಾಚಕಬಳಗವೊಂದನ್ನು ರಚಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ವಿಶಿಷ್ಟವಾದ ಉಡುಗೊರೆ ನೀಡಿದೆ.
ತಿರುವನಂತಪುರದ ಹೃದಯಭಾಗದಲ್ಲಿರುವ ರಾಜ್ಯ ಕೇಂದ್ರ ಗ್ರಂಥಾಲಯವು , ಇಂದು ಮಹಿಳೆಯರು ಅದರಲ್ಲೂ ವಿಶೇಷವಾಗಿ ಗೃಹಿಣಿಯರಲ್ಲಿ ಓದುವ ಹವ್ಯಾಸವನ್ನು ಉತ್ತೇಜಿಸಲು ಸರ್ವ ಮಹಿಳಾ ವಾಚಕ ಬಳಗವನ್ನು ಆರಂಭಿಸಿದೆ.
ತಿರುವನಂತಪುರ ಸಾರ್ವಜನಿಕ ಗ್ರಂಥಾಲಯವೆಂದೇ ಜನಪ್ರಿಯವಾಗಿರುವ ಈ ಪಾರಂಪರಿಕ ಕಟ್ಟಡದಲ್ಲಿ 16ನೇ ಶತಮಾನದಿಂದ ಮೊದಲ್ಗೊಂಡು ಈವರೆಗಿನ ಅತ್ಯಂತ ಅಪೂರ್ವ ಗ್ರಂಥಗಳ ಸಂಗ್ರಹವೇ ಇದೆ. 1829ರಲ್ಲಿ ಈ ಗ್ರಂಥಾಲಯವನ್ನು ಸ್ಥಾಪಿಸಲಾಗಿತ್ತು. ಐದು ಲಕ್ಷಕ್ಕೂ ಅಧಿಕ ಗ್ರಂಥಗಳನ್ನು ಹೊಂದಿರುವ ಈ ಗ್ರಂಥಾಲಯದಲ್ಲಿ 300ಕ್ಕೂ ಅಧಿಕ ನಿಯತಕಾಲಿಕೆಗಳು ಓದುಗರಿಗೆ ಲಭ್ಯವಿದೆ.
ಮಕ್ಕಳು ಸೇರಿದಂತೆ ಸಾರ್ವಜನಿಕರಲ್ಲಿ ಓದುವ ಹವ್ಯಾಸವನ್ನು ಬೆಳೆಸಲು ಗ್ರಂಥಾಲಯವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆಯೆಂದು ರಾಜ್ಯ ಗ್ರಂಥಪಾಲಕಿ ಪಿ.ಕೆ. ಶೋಭನಾ ತಿಳಿಸಿದ್ದಾರೆ. ಇದೀಗ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳ ಲೋಕಕ್ಕೆ ಸೆಳೆಯುವ ಉಪಕ್ರಮವನ್ನು ಗ್ರಂಥಾಲಯ ಆರಂಭಿಸಿದೆಯೆಂದು ಅವರು ಹೇಳಿದ್ದಾರೆ. ಪೆಣ್‌ವಾಯನಕೂಟ್ಟು (ಮಹಿಳಾ ಕೂಟ್ಟು) ಎಂದು ಹೆಸರಿಡಲಾದ ಈ ಬಳಗವು, ಮಹಿಳೆಯರಿಗೆ ಪುಸ್ತಕಗಳ ಬಗ್ಗೆ ಚರ್ಚಿಸಲು ವೇದಿಕೆಯೊಂದನ್ನು ಒದಗಿಸಲಿದೆಯೆಂದು ಶೋಭನಾ ತಿಳಿಸಿದ್ದಾರೆ.
ಈ ಬಳಗದ ನೋಂದಾಯಿತರಾದ ಸದಸ್ಯೆಯರು ಅನುಕೂಲಕರ ಸಮಯಗಳಲ್ಲಿ ಗ್ರಂಥಾಲಯದ ಸಭಾಭವನದಲ್ಲಿ ಸಭೆ ಸೇರಿ ಚರ್ಚೆ, ಸಂವಾದಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಗ್ರಂಥಾಲಯವು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದರೂ, ಅವುಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯು ತುಲನಾತ್ಮಕವಾಗಿ ಕಡಿಮೆಯಿತ್ತು. ಇದೀಗ ನೂತನ ಮಹಿಳಾ ಓದುಗ ಬಳಗವು, ಇಂತಹ ಕಾರ್ಯಕ್ರಮಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡಲಿದೆಯೆಂದು ಶೋಭನಾ ಭರವಸೆ ವ್ಯಕಪಡಿಸಿದರು.