×
Ad

ಅಂತ್ಯೋದಯ ಭವನದ ಅಗ್ನಿ ಅವಘಡದಲ್ಲಿ ಒಳಗಿನವರ ಕೈವಾಡ: ಅಧಿಕಾರಿಗಳ ಶಂಕೆ

Update: 2019-03-08 22:56 IST

ಹೊಸದಿಲ್ಲಿ,ಮಾ.8: ಮಾರ್ಚ್ 6ರಂದು ದಿಲ್ಲಿಯ ಅಂತ್ಯೋದಯ ಭವನದಲ್ಲಿ ಸಂಭವಿಸಿದ ಅಗ್ನಿ ಅವಘಡದ ಹಿಂದೆ ಕಾಣದ ಕೈಗಳು ಕೈಯಾಡಿಸಿವೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಅಗ್ನಿ ದುರಂತದಲ್ಲಿ ಸಿಐಎಸ್‌ಎಫ್ ಅಧಿಕಾರಿ ಎಂ.ಪಿ ಗೊಡರ ಪ್ರಾಣ ಕಳೆದುಕೊಳ್ಳುವ ಜೊತೆಗೆ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಸಬಲೀಕರಣ ಇಲಾಖೆಗೆ ಸೇರಿದ ಅನೇಕ ದಾಖಲೆಗಳು ಬೆಂಕಿಗಾಹುತಿಯಾಗಿದ್ದವು. ಈ ಅವಘಡದಲ್ಲಿ ಮೋದಿ ಸರಕಾರದ ಮಹಾತ್ವಾಕಾಂಕ್ಷೆಯ ಪ್ರವೇಶಸಾಧ್ಯ ಭಾರತ ಅಭಿಯಾನ (ಎಐಸಿ)ಗೆ ಸೇರಿದ ದೊಡ್ಡ ಪ್ರಮಾಣದ ಆಡಿಟ್ ದಾಖಲೆಗಳು ಭಸ್ಮವಾಗಿದ್ದವು. ಈ ದಾಖಲೆಗಳನ್ನು ಪರಿಶೀಲಿಸಲು ಸಂಪೂರ್ಣ ಆಡಿಟ್ ತಂಡ ಒಂದು ವಾರ ಮೊದಲಷ್ಟೇ ಈ ಕಟ್ಟಡದ ಐದನೇ ಮಹಡಿಯಲ್ಲಿ ನೆಲೆಯೂರಿತ್ತು.

ಆಡಿಟ್ ಆರಂಭವಾಗುವುದಕ್ಕೂ ಮೊದಲೇ ಬೆಂಕಿ ಅವಘಡದಲ್ಲಿ ದಾಖಲೆಗಳು ಭಸ್ಮವಾಗಿರುವುದು ಹಲವು ಅಧಿಕಾರಿಗಳು ಘಟನೆ ಬಗ್ಗೆ ಶಂಕೆ ವ್ಯಕ್ತಪಡಿಸುವಂತೆ ಮಾಡಿದೆ. ಈ ಕುರಿತು ದಿ ವೈರ್ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ, ಪ್ರವೇಶಸಾಧ್ಯ ಭಾರತ ಅಭಿಯಾನದ ಸಂಪೂರ್ಣ ದಾಖಲೆಗಳು ಅಗ್ನಿ ದುರಂತದಲ್ಲಿ ನಾಶವಾಗಿದೆ. ಈ ಅಭಿಯಾನವನ್ನು 2015ರ ಡಿಸೆಂಬರ್‌ನಲ್ಲಿ ಆರಂಭಿಸಲಾಗಿತ್ತು. ಆದರೆ ಅದು ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿತ್ತು. ಈ ಬಗ್ಗೆ ಇಲಾಖೆಯ ಅಧಿಕಾರಿಗಳು, ಮುಖ್ಯವಾಗಿ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿಯನ್ನು ಪ್ರಶ್ನಿಸಿದಾಗ ಸರಿಯಾದ ಉತ್ತರ ನೀಡಲು ವಿಫಲವಾಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದು ಮೋದಿ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿತ್ತು. ಅಧಿಕಾರಿಗಳ ಪ್ರಶ್ನೆಯಿಂದ ಸರಕಾರಕ್ಕೂ ಮುಜುಗರ ಉಂಟಾಗಿತ್ತು. ಈ ಅಭಿಯಾನದಡಿ ಕಳೆದ ಐದು ವರ್ಷಗಳಲ್ಲಿ ಎಷ್ಟು ಸಾಧನೆ ಮಾಡಲಾಗಿದೆ ಎಂಬುದರ ಬಗ್ಗೆ ಇತ್ತೀಚೆಗೆ ಸರಕಾರ ಪರಿಶೀಲಿಸಲು ಮುಂದಾಗಿತ್ತು. ಆದರೆ ನಮಗೆಲ್ಲರಿಗೂ ತಿಳಿದಿರುವಂತೆ ಎಐಸಿಗೆ ನೀಡಲಾದ ಯಾವ ಗುರಿಯನ್ನೂ ಸಾಧಿಸಲಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಯೋಜನೆಗಳ ವೆಚ್ಚದ ಅಂದಾಜಿನ ದಾಖಲೆಗಳೂ ಸೇರಿದಂತೆ ಬಹುತೇಕ ಕಡತಗಳು ಬೆಂಕಿ ದುರಂತದಲ್ಲಿ ನಾಶವಾಗಿವೆ. ಇದು ಒಳಗಿನ ವ್ಯಕ್ತಿಗಳ ಕೆಲಸ ಎಂಬ ಆತಂಕ ಕೆಲವು ಅಧಿಕಾರಿಗಳಿಗೆ ಇದೆ ಎಂದು ವೈರ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News