×
Ad

ಗುಣೇಶ್ವರನ್ ಜೀವನಶ್ರೇಷ್ಠ ಗೆಲುವು: ದ್ವಿತೀಯ ಸುತ್ತಿಗೆ

Update: 2019-03-08 23:33 IST

ಇಂಡಿಯನ್ ವೆಲ್ಸ್(ಅಮೆರಿಕ), ಮಾ.8: ಇಂಡಿಯನ್ ವೆಲ್ಸ್ ಟೂರ್ನಿಯ ಪ್ರಥಮ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.69ನೇ ಆಟಗಾರ ಫ್ರಾನ್ಸ್‌ನ ಬೆನೊಯಿಟ್ ಪೇರ್ ಅವರನ್ನು 7-6(5), 6-4 ಸೆಟ್‌ಗಳಿಂದ ಮಣಿಸಿದ ಭಾರತದ ಪ್ರಜ್ಞೇಶ್ ಗುಣೇಶ್ವರನ್ ಗುರುವಾರ ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಗೆಲುವು ಸಾಧಿಸಿದ್ದಾರೆ.

ಅರ್ಹತಾ ಸುತ್ತಿನಿಂದ ಟೂರ್ನಿಗೆ ಪ್ರವೇಶಿಸಿರುವ ಗುಣೇಶ್ವರನ್, 1 ಗಂಟೆ 29 ನಿಮಿಷಗಳ ಆಟದಲ್ಲಿ ಮಾಜಿ ವಿಶ್ವ ನಂ.18 ಆಟಗಾರನಿಗೆ ಮಣ್ಣುಮುಕ್ಕಿಸಿ ಎರಡನೇ ಸುತ್ತು ಪ್ರವೇಶಿಸಿದ್ದು ತಮ್ಮ ಮುಂದಿನ ಸುತ್ತಿನ ಪಂದ್ಯದಲಿ 17ನೇ ಶ್ರೇಯಾಂಕದ ಜಾರ್ಜಿಯದ ಆಟಗಾರ ನಿಕೊಲಾಝ್ ಬಾಶಿಲ್‌ಶವಿಲಿ ಅವರ ಸವಾಲನ್ನು ಎದುರಿಸಲಿದ್ದಾರೆ.

ಈ ವರ್ಷದ ಆಸ್ಟ್ರೇಲಿಯನ್ ಓಪನ್‌ಗೆ ಅರ್ಹತೆ ಪಡೆದಿದ್ದ 29 ವರ್ಷದ ಚೆನ್ನೈ ಆಟಗಾರ ಈಗಾಗಲೇ ಅಂದಾಜು 18.55 ಲಕ್ಷ ನಗದು ಮೊತ್ತವನ್ನು ಖಚಿತಪಡಿಸಿದ್ದಾರೆ. ಅಲ್ಲದೆ ತಮ್ಮ ಪ್ರಯತ್ನಕ್ಕೆ 41 ಎಟಿಪಿ ಅಂಕಗಳನ್ನು ಗಳಿಸಿದ್ದಾರೆ.

7 ಏಸ್‌ಗಳನ್ನು ಸಿಡಿಸಿದ ಎದುರಾಳಿ ಪೇರ್‌ಗೆ ಹೋಲಿಸಿದರೆ ಗುಣೇಶ್ವರನ್ ಕೇವಲ 1 ಏಸ್ ಸಿಡಿಸಿದರು. ಆದರೆ ಭಾರತದ ಆಟಗಾರ ಸರ್ವ್‌ಗಳಲ್ಲಿ ಹೆಚ್ಚು ಸ್ಥಿರತೆಯನ್ನು ತೋರಿದ್ದು ಗೆಲುವಿಗೆ ಕಾರಣವಾಯಿತು. ತಾನು ಎದುರಿಸಿದ 8 ಬ್ರೇಕ್‌ಪಾಯಿಂಟ್‌ಗಳ ಪೈಕಿ ಗುಣೇಶ್ವರನ್ 5 ಪಾಯಿಂಟ್‌ಗಳನ್ನು ಉಳಿಸಿಕೊಂಡರೆ, ಪೇರ್ 6 ಪಾಯಿಂಟ್‌ಗಳಲ್ಲಿ 2 ಪಾಯಿಂಟ್ ಉಳಿಸಿಕೊಂಡರು.

ವಿಶ್ವ ರ್ಯಾಂಕಿಂಗ್‌ನಲ್ಲಿ 97ನೇ ಸ್ಥಾನದಲ್ಲಿರುವ ಗುಣೇಶ್ವರನ್‌ಗೆ ಇದೊಂದು ಮಹತ್ವದ ಗೆಲುವಾಗಿದ್ದು ಹಳೆಯ ಸೋಲುಗಳನ್ನು ಮರೆತು ಹೊಸ ಭರವಸೆಯತ್ತ ಸಾಗಲು ನೆರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News