ಪ್ರೊ ಕಬಡ್ಡಿ ಲೀಗ್: ಎಪ್ರಿಲ್‌ನಲ್ಲಿ ಹರಾಜು ಪ್ರಕ್ರಿಯೆ
ಮುಂಬೈ, ಮಾ.8: ಜುಲೈನಲ್ಲಿ ನಡೆಯಲಿರುವ 7ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ಗೆ ಆಟಗಾರರ ಹರಾಜು ಪ್ರಕ್ರಿಯೆಯು ಎಪ್ರಿಲ್ 8 ಹಾಗೂ 9 ರಂದು ನಡೆಯಲಿದೆ.
‘‘ಹರಾಜು ಪ್ರಕ್ರಿಯೆಯನ್ನು ಎಪ್ರಿಲ್ 8 ಹಾಗೂ 9 ರಂದು ಮುಂಬೈನಲ್ಲಿ ನಡೆಸಲಾಗುವುದು. ದಾಖಲೆಯ ಪ್ರಕಾರ ನಾವು ಮುಂದುವರಿಯುತ್ತಿದ್ದು 8ನೇ ಆವೃತ್ತಿಯು ಮುಂದಿನ ವರ್ಷದ(2020) ಜುಲೈನಲ್ಲಿ ಆರಂಭವಾಗಲಿದೆ. ಇದು ಎಲ್ಲರಿಗೂ ಅನುಕೂಲವಾಗಲಿದೆ’’ ಎಂದು ಲೀಗ್‌ನ ಆಯುಕ್ತ ಅನುಪಮ್ ಗೋಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು. ‘‘7ನೇ ಆವೃತ್ತಿಯಲ್ಲಿ 12 ತಂಡಗಳು ಭಾಗವಹಿಸುತ್ತಿದ್ದು ಜು.19ರಿಂದ ಟೂರ್ನಿ ಆರಂಭವಾಗಲಿದೆ. ವೇಳಾಪಟ್ಟಿಯನ್ನು ನಂತರ ಬಿಡುಗಡೆ ಮಾಡಲಾಗುತ್ತದೆ. ಮುಂಬರುವ ಆವೃತ್ತಿಗೆ ಆಟಗಾರರನ್ನು ಉಳಿಸಿಕೊಳ್ಳುವ ವಿವರವನ್ನು ಮಾರ್ಚ್‌ನ ಮಧ್ಯದಲ್ಲಿ ಪ್ರಕಟಿಸಲಾಗುವುದು’’ ಎಂದು ಲೀಗ್‌ನ ಆಯುಕ್ತ ಹೇಳಿದ್ದಾರೆ.
ಕಳೆದ ವರ್ಷ ಜೈಪುರ ಪಿಂಕ್ ಪ್ಯಾಂಥರ್ಸ್ ತನ್ನ ತವರಿನ ಎಲ್ಲ ಪಂದ್ಯಗಳನ್ನು ಹರ್ಯಾಣದ ಪಂಚಕುಲಾದಲ್ಲಿ ಆಡಿತ್ತು. ಆದರೆ ಈ ಬಾರಿ ಜೈಪುರ ತಂಡ ತನ್ನ ತವರಿನಲ್ಲೇ ಪಂದ್ಯಗಳನ್ನು ಆಡಲಿದೆ ಎಂದು ಗೋಸ್ವಾಮಿ ಹೇಳಿದ್ದಾರೆ.
ಲೀಗ್‌ನ ಕಳೆದ 6ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.