ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಶಫೀಖ್ ಮೌಲವಿ ಬಂಧನ

Update: 2019-03-09 10:39 GMT

ತಿರುವನಂತಪುರಂ, ಮಾ. 9:  ಹದಿನೈದು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ತೋಲಿಕೋಡ್ ಇಮಾಮ್ ಶಫೀಖ್ ಮೌಲವಿ ಎಂಬಾತನನ್ನು ವಿಶೇಷ ಪೊಲೀಸ್ ತಂಡವೊಂದು ಬಂಧಿಸಿದೆ.

ಆರೋಪಿ ಶಫೀಖ್ ಜತೆ ಆತನ ಸಹಚರ, ಪೆರುಂಬವೂರ್ ನಿವಾಸಿ ಫಾಝಿಲ್ ಎಂಬಾತನನ್ನೂ ಮಧುರೈ ನಗರದ ಲಾಡ್ಜ್ ಒಂದರಿಂದ ಬಂಧಿಸಲಾಗಿದೆ. ಈ ಇಬ್ಬರೂ ಆರೋಪಿಗಳಿಗಾಗಿ ಪೊಲೀಸರು ಮೂರು ವಾರಗಳ ಕಾಲ ಶೋಧಿಸಿದ್ದರು.

ಫಾಝಿಲ್ ಈ ಪ್ರಕರಣದ  ಪ್ರಮುಖ ಆರೋಪಿಯಾಗಿರುವ 35 ವರ್ಷದ ಇಮಾಮ್ ನ ಚಾಲಕನಾಗಿದ್ದು ಪೊಲೀಸರಿಂದ ತಪ್ಪಿಸಿಕೊಳ್ಳಲು ಆತನನ್ನು ವಿವಿಧೆಡೆಗಳಿಗೆ ಕರೆದುಕೊಂಡು ಹೋಗಿದ್ದನೆಂದು ಜಿಲ್ಲಾ ಕ್ರೈಂ ಬ್ರ್ಯಾಂಚ್ ಡಿವೈಎಸ್‍ಪಿ ಡಿ ಅಶೋಕನ್ ಹೇಳಿದ್ದಾರೆ. ಬಂಧಕ್ಕೊಳಗಾಗುವ ಮುನ್ನ ಇಬ್ಬರೂ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಅಡಗಿದ್ದರಲ್ಲದೆ ಪೊಲೀಸರು ತನ್ನ ಗುರುತು ಪತ್ತೆ ಹಚ್ಚದೇ ಇರುವಂತಾಗಲು ಇಮಾಮ್ ತನ್ನ ಮುಖಚರ್ಯೆಯನ್ನೂ ಬದಲಿಸಿದ್ದ.

ಆರೋಪಿಯ ಸಂಬಂಧಿ ನೌಶಾದ್ ಎಂಬಾತ ಫ್ಲೈವುಡ್ ಉದ್ಯಮದಲ್ಲಿದ್ದು ತಮಿಳುನಾಡು ಮತ್ತು ಆಂಧ್ರ ಪ್ರದೇಶದ ವಿವಿಧ ಸ್ಥಳಗಳ ಪರಿಚಯ ಆತನಿಗಿದ್ದುದರಿಂದ ಆತ ಇಮಾಮ್ ಪೊಲೀಸರಿಗೆ ಶರಣಾಗದೆ ತಪ್ಪಿಸಿಕೊಳ್ಳುವಂತೆ ಸಲಹೆ ನೀಡಿದ್ದನೆನ್ನಲಾಗಿದೆ.

ನೌಶಾದ್ ಹಾಗೂ ಸುಧೀರ್ ಎಂಬವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಆರೋಪಿ ಇರುವ ಸ್ಥಳದ ಕುರಿತು ಪೊಲೀಸರಿಗೆ ಮಾಹಿತಿ ದೊರಕಿತ್ತು. ಅಂತೆಯೇ ಏಳು ಮಂದಿಯ ಪೊಲೀಸ್ ತಂಡ ಅಲ್ಲಗೆ ತೆರಳಿ ಆರೋಪಿ ಮತ್ತಾತನ ಚಾಲಕನನ್ನು ಬಂಧಿಸಿ ಅವರ ಕಾರನ್ನು ವಶಕ್ಕೆ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News