×
Ad

ಉಗ್ರರ ವಿರುದ್ಧ ಕ್ರಮಕ್ಕೆ ತಪ್ಪಿದರೆ ಪಾಕ್ ಮೂಲೆಗುಂಪು: ಅಮೆರಿಕದ ಭಾರತ ಮೂಲದ ಸಂಸದ ಆಮಿ ಬೇರ

Update: 2019-03-09 20:39 IST

ವಾಶಿಂಗ್ಟನ್, ಮಾ. 9: ತನ್ನ ನೆಲದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಪಾಕಿಸ್ತಾನ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಆ ದೇಶವು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಮೂಲೆಗುಂಪಾಗುತ್ತದೆ ಎಂದು ಅಮೆರಿಕದ ಭಾರತ ಮೂಲದ ಪ್ರಭಾವಿ ಸಂಸದ ಆಮಿ ಬೇರ ಹೇಳಿದ್ದಾರೆ.

ಅದೇ ವೇಳೆ, ಪಾಕಿಸ್ತಾನದ ಜೈಶೆ ಮುಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯ ಸ್ಥಾಪಕ ಮಸೂದ್ ಅಝರ್‌ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಕ್ಕೆ ಚಲಾಯಿಸಿರುವ ವೀಟೊವನ್ನು ತೆರವುಗೊಳಿಸುವ ಮೂಲಕ ರಚನಾತ್ಮಕ ಪಾತ್ರವನ್ನು ವಹಿಸುವಂತೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ‌ನ ವಿದೇಶ ವ್ಯವಹಾರಗಳ ಸಮಿತಿಯೊಂದರ ಅಧ್ಯಕ್ಷರೂ ಆಗಿರುವ ಅವರು ಚೀನಾವನ್ನು ಒತ್ತಾಯಿಸಿದರು.

‘‘ಪ್ರಧಾನಿ ಇಮ್ರಾನ್ ಖಾನ್ ಭಯೋತ್ಪಾದಕರ ವಿರುದ್ಧ ಪ್ರಾಮಾಣಿಕ ಕಾರ್ಯಾಚರಣೆಗೆ ಆದೇಶ ನೀಡಿದರೆ ಪಾಕಿಸ್ತಾನವನ್ನು ಬೆಂಬಲಿಸಲು ಅಮೆರಿಕದ ಸಂಸತ್ತು ಸಿದ್ಧವಿದೆ. ಇದು ಅವರ ದೇಶದ ಆರ್ಥಿಕತೆಯನ್ನು ಸುಧಾರಿಸಲು ನೆರವಾಗುತ್ತದೆ’’ ಎಂದು ‘ನ್ಯೂಸ್ ಇಂಡಿಯ ಟೈಮ್ಸ್’ನಲ್ಲಿ ಶುಕ್ರವಾರ ಪ್ರಕಟಗೊಂಡ ‘ಹೊಸ ದಾರಿಯನ್ನು ಅರಸಲು ಪಾಕಿಸ್ತಾನಕ್ಕೆ ಸಕಾಲ’ ಎಂಬ ಲೇಖನದಲ್ಲಿ ಅವರು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಸೆರೆಯಾಗಿದ್ದ ವಾಯುಪಡೆ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್‌ರನ್ನು ಬಿಡುಗಡೆ ಮಾಡುವ ಮೂಲಕ ಪಾಕಿಸ್ತಾನ ಸರಿಯಾದ ಕೆಲಸವನ್ನು ಮಾಡಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News