ಉಗ್ರ ಗುಂಪುಗಳನ್ನು ‘ಅತಿ ಹೆಚ್ಚು ಅಪಾಯಕಾರಿ’ ದರ್ಜೆಗೆ ಏರಿಸಲು ಪಾಕ್ ನಿರ್ಧಾರ

Update: 2019-03-09 15:30 GMT

ಇಸ್ಲಾಮಾಬಾದ್, ಮಾ. 9: ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)ನ ಶರತ್ತುಗಳನ್ನು ಪೂರೈಸುವುದಕ್ಕಾಗಿ, ಜೈಶೆ ಮುಹಮ್ಮದ್ ಮುಂತಾದ ನಿಷೇಧಿತ ಸಂಘಟನೆಗಳನ್ನು ‘ಅತ್ಯಂತ ಹೆಚ್ಚು ಅಪಾಯಕಾರಿ’ ದರ್ಜೆಗೆ ಏರಿಸಿ ಅವುಗಳ ಮೇಲೆ ನಿಗಾ ಇಡಲು ಹಾಗೂ ಅವುಗಳ ಚಟುವಟಿಕೆಗಳನ್ನು ಮರುಪರಿಶೀಲನೆ ನಡೆಸಲು ಪಾಕಿಸ್ತಾನ ನಿರ್ಧರಿಸಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಈ ಭಯೋತ್ಪಾದಕ ಸಂಘಟನೆಗಳನ್ನು ಪಾಕಿಸ್ತಾನ ‘ಕಡಿಮೆ’ ಅಥವಾ ‘ಮಧ್ಯಮ’ ಅಪಾಯಕಾರಿ ದರ್ಜೆಯಲ್ಲಿರಿಸಿರುವುದಕ್ಕೆ ಪ್ಯಾರಿಸ್‌ನಲ್ಲಿರುವ ಜಾಗತಿ ಆರ್ಥಿಕ ಅಪರಾಧಗಳ ನಿಗಾ ಸಂಸ್ಥೆ ಅತೃಪ್ತಿ ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದಾಗಿದೆ.

ಐಸಿಸ್, ಅಲ್-ಖಾಯ್ದ, ಜಮಾಅತುದಅವಾ (ಜೆಯುಡಿ), ಫಲಾಹಿ ಇನ್ಸಾನಿಯತ್ ಫೌಂಡೇಶನ್ (ಎಪ್‌ಐಎಫ್), ಲಷ್ಕರೆ ತಯ್ಯಬ, ಜೈಶೆ ಮುಹಮ್ಮದ್, ಹಕ್ಕಾನಿ ನೆಟ್‌ವರ್ಕ್ ಮುಂತಾದ ಸಂಘಟನೆಗಳು ಹಾಗೂ ತಾಲಿಬಾನ್‌ಗೆ ಸೇರಿದ ವ್ಯಕ್ತಿಗಳಿಗೆ ಭಯೋತ್ಪಾದನೆ ನಡೆಸಲು ಹಣ ನೀಡುವುದರ ಪರಿಣಾಮವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂಬುದಾಗಿ ಎಫ್‌ಎಟಿಎಫ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಈ ಭಯೋತ್ಪಾದಕ ಸಂಘಟನೆಗಳ ಅಪಾಯ ದರ್ಜೆಯನ್ನು ಹೆಚ್ಚಳ ಮಾಡಿದ ಬಳಿಕ, ಕಾನೂನು, ಆಡಳಿತ, ತನಿಖೆ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಅವುಗಳ ಭದ್ರತಾ ತಪಾಸಣೆಗಳನ್ನು ಹೆಚ್ಚಿಸಲಾಗುವುದು ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ವಾಹನಗಳ ಸಾಲಿನ ಮೇಲೆ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಗೆ ಸೇರಿದ ಆತ್ಮಹತ್ಯಾ ಬಾಂಬರ್ ನಡೆಸಿದ ದಾಳಿಯಲ್ಲಿ ಕನಿಷ್ಠ 40 ಯೋಧರು ಹುತಾತ್ಮರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News