ಕುಸಿಯುತ್ತಿರುವ ಭಾರತೀಯ ಕುಟುಂಬ ವ್ಯವಸ್ಥೆಯನ್ನು ಪುನರ್‌ನಿರ್ಮಿಸಲು ಆರ್‌ಎಸ್‌ಎಸ್ ನಿರ್ಧಾರ: ಆರೆಸ್ಸೆಸ್

Update: 2019-03-09 17:05 GMT

ಗ್ವಾಲಿಯರ್, ಮಾ.9: ಮಧ್ಯ ಪ್ರದೇಶದ ಗ್ವಾಲಿಯರ್‌ ನಲ್ಲಿ ನಡೆಯುತ್ತಿರುವ ಆರೆಸ್ಸೆಸ್ನ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಸಭೆಯ ಎರಡನೇ ದಿನವಾದ ಶನಿವಾರ, ಸಾಮಾಜಿಕ ಬದಲಾವಣೆಯಿಂದ ಕುಸಿಯುತ್ತಿರುವ ಭಾರತೀಯ ಕುಟುಂಬ ವ್ಯವಸ್ಥೆಯನ್ನು ಪುನರ್‌ನಿರ್ಮಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಖಿಲ ಭಾರತ ಪ್ರತಿನಿಧಿ ಸಭಾ ಆರೆಸ್ಸೆಸ್ ನೀತಿ ನಿರ್ಧಾರ ಮಾಡುವ ಅತ್ಯುನ್ನತ ವಿಭಾಗವಾಗಿದ್ದು, ಅದರ ಮೂರು ದಿನಗಳ ಸಭೆ ಶುಕ್ರವಾರ ಗ್ವಾಲಿಯರ್‌ನಲ್ಲಿ ಆರಂಭಗೊಂಡಿದೆ. ಈ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಬಾಗವತ್ ಸೇರಿದಂತೆ ಪ್ರತಿನಿಧಿ ಸಭಾದ 1,400 ಸದಸ್ಯರು ಭಾಗವಹಿಸುತ್ತಿದ್ದಾರೆ.

ಸಭೆಯಲ್ಲಿ ಮಾತನಾಡಿದ ಸಂಘಪರಿವಾರದ ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಜಗತ್ತು ಕುಟುಂಬ ವ್ಯವಸ್ಥೆ ಮತ್ತು ಮೌಲ್ಯಗಳನ್ನು ಭಾರತದಿಂದ ಕಲಿಯಿತು. ಆದರೆ ಸಾಮಾಜಿಕ ಬದಲಾವಣೆಯಿಂದಾಗಿ ಅದು ಕುಸಿಯುತ್ತಿದೆ. ಕೂಡು ಕುಟುಂಬಗಳು ಕಡಿಮೆಯಾಗಿ ಪತಿ,ಪತ್ನಿ ಮತ್ತು ಮಕ್ಕಳು ಮಾತ್ರ ಎಂಬ ಸಣ್ಣ ಪರಿವಾರಗಳು ಹೆಚ್ಚಾಗಿವೆ. ಭಾರತದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಏರುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಹೆತ್ತವರಿಗೆ ಅಗೌರವ ಸೂಚಿಸುವ ವರ್ತನೆಗಳು ಹೆಚ್ಚಾಗಿವೆ ಮತ್ತು ಅಪರಾಧಗಳು ಕುಟುಂಬದ ಒಳ ಹೊಕ್ಕಿವೆ. ಭಾರತದ ಮುಖ್ಯ ಸಾಮಾಜಿಕ ರಚನೆಯಾಗಿರುವ ಕುಟುಂಬ ವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಆರೆಸ್ಸೆಸ್ ನಿರ್ಣಯವೊಂದನ್ನು ಜಾರಿ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕುಟುಂಬ ವ್ಯವಸ್ಥೆಯನ್ನು ಕಾಪಾಡಲು ನಾವು ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಅದರಂತೆ ಒಂದು ಕುಟುಂಬವು ಇತರ ಐದು ಕುಟುಂಬಗಳ ಜೊತೆ ಸಂಪರ್ಕದಲ್ಲಿರುವುದು ಒಂದಾಗಿದೆ ಎಂದು ಸಂಘಪರಿವಾರದ ನಾಯಕ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News