ಗಡಿಯಲ್ಲಿ ಬಂಧಿತನಾದ ಪಾಕ್‌ ಪ್ರಜೆಯನ್ನು 24 ಗಂಟೆಯೊಳಗೆ ಹಸ್ತಾಂತರಿಸಿದ ಬಿಎಸ್‌ಎಫ್

Update: 2019-03-09 17:22 GMT

ಜಮ್ಮು,ಮಾ.9: ಜಮ್ಮುಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಸಮೀಪ ಬಂಧಿಸಲ್ಪಟ್ಟ ಪಾಕ್ ಪ್ರಜೆಯೊಬ್ಬನನ್ನು ಗಡಿ ಭದ್ರತಾಪಡೆ (ಬಿಎಸ್‌ಎಫ್)ಯು ಕೇವಲ 24 ತಾಸುಗಳ ಬಳಿಕ, ಸದ್ಭಾವನೆಯ ಸೂಚಕವಾಗಿ ಪಾಕಿಸ್ತಾನದ ರೇಂಜರ್ ಗಳಿಗೆ ಹಸ್ತಾಂತರಿಸಿದೆ.

ಸಂಬಾ ಜಿಲ್ಲೆಯ ರಾಮಘರ್ ಸೆಕ್ಟರ್‌ನಲ್ಲಿ ಶುಕ್ರವಾರ ಭಾರತದ ಗಡಿಯೊಳಗೆ ಪ್ರವೇಶಿಸಿದ್ದ ಪಾಕ್ ಪ್ರಜೆಯನ್ನು ಬಿಎಸ್‌ಎಫ್ ಯೋಧರು ಬಂಧಿಸಿದ್ದರು. ಪಾಕ್ ಪ್ರಜೆಯನ್ನು 24 ತಾಸುಗಳೊಳಗೆ ಸ್ವದೇಶಕ್ಕೆ ಹಸ್ತಾಂತರಿಸಿದ ಬಿಎಸ್‌ಎಫ್ ಯೋಧರ ಮಾನವೀಯ ನಡೆಯನ್ನು ಪಾಕಿಸ್ತಾನಿ ರೇಂಜರ್ ‌ಗಳು ಶ್ಲಾಘಿಸಿದ್ದಾರೆಂದು ಅವು ಹೇಳಿವೆ. ಪಾಕ್ ಪ್ರಜೆಯು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿದ್ದಾನೆಂದು ಅಧಿಕೃತ ಮೂಲಗಳು ತಿಳಿಸಿವೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ಸೇನೆಗೆ ಸೆರೆಸಿಕ್ಕ ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್‌ರನ್ನು ಶಾಂತಿಯ ಸೂಚಕವಾಗಿ ಭಾರತಕ್ಕೆ ಪಾಕಿಸ್ತಾನವು ಹಸ್ತಾಂತರಿಸಿದ ವಾರದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News