ಕಾಶ್ಮೀರ: ಉಗ್ರರ ಸಂಘಟನೆ ಸೇರದಂತೆ ಮಕ್ಕಳನ್ನು ತಡೆಯಲು ಸೇನಾಪಡೆ ಕರೆ

Update: 2019-03-09 17:27 GMT

 ಶ್ರೀನಗರ, ಮಾ.9: ಭಯೋತ್ಪಾದಕ ಸಂಘಟನೆಗೆ ಸೇರ್ಪಡೆಗೊಂಡಿರುವ ತಮ್ಮ ಮಕ್ಕಳನ್ನು ಮರಳಿ ಮುಖ್ಯವಾಹಿನಿಗೆ ಕರೆತರಲು ತಾಯಂದಿರು ಮುಂದಾಗಬೇಕು ಎಂದು ಸೇನಾಪಡೆಯ ಹಿರಿಯ ಅಧಿಕಾರಿ ಕಿವಿಮಾತು ಹೇಳಿದ್ದಾರೆ.

ಹೀಗೆ ಮರಳಿ ಬಂದವರಿಗೆ ಪೂರ್ಣ ಭದ್ರತೆ ಮತ್ತು ಸುರಕ್ಷೆ ಖಾತರಿ ಪಡಿಸಲಾಗುವುದು. ಬದುಕು ದೇವರ ಕೊಡುಗೆಯಾಗಿದ್ದು ಇದನ್ನು ಕುಟುಂಬದವರೊಂದಿಗೆ ಸಂತೋಷವಾಗಿ ಕಳೆಯಬೇಕು ಎಂದು ಶ್ರೀನಗರದಲ್ಲಿರುವ ಸೇನಾಪಡೆಯ 15 ಕಾರ್ಪ್ಸ್ ವಿಭಾಗದ ಪ್ರಧಾನ ಕಮಾಂಡಿಂಗ್ ಆಫೀಸರ್ ಲೆಜ ಕೆಜೆಎಸ್ ಧಿಲ್ಲೋನ್ ಹೇಳಿದ್ದಾರೆ.

ಕಾಶ್ಮೀರದ ಎಲ್ಲಾ ತಾಯಂದಿರೂ ತಮ್ಮ ಮಕ್ಕಳನ್ನು ಭಯೋತ್ಪಾದಕ ಸಂಘಟನೆಗೆ ಸೇರದಂತೆ ತಡೆಯಬೇಕು ಹಾಗೂ ಒಂದು ವೇಳೆ ಈಗಾಗಲೇ ಸೇರ್ಪಡೆಗೊಂಡಿದ್ದರೆ ಅಂತವರನ್ನು ಮರಳಿ ಕರೆತರಲು ಮುಂದಾಗಬೇಕು ಎಂದು ಹೃದಯಾಂತರಾಳದಿಂದ ಮನವಿ ಮಾಡಿಕೊಳ್ಳುತ್ತಿದ್ದೇನೆ. ಇವರಿಗೆ ಶೇ.100ರಷ್ಟು ಭದ್ರತೆ, ಸುರಕ್ಷತೆ ಒದಗಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಅವಕಾಶ ಖಾತರಿ ಪಡಿಸುತ್ತಿದ್ದೇನೆ ಎಂದವರು ಹೇಳಿದ್ದಾರೆ. ಜಮ್ಮು -ಕಾಶ್ಮೀರ ಲೈಟ್ ಇನ್‌ಫ್ಯಾಂಟ್ರಿ ರೆಜಿಮೆಂಟ್(ಜೆಎಕೆಎಲ್‌ಐ)ಗೆ ನೂತನಾಗಿ ಸೇರ್ಪಡೆಗೊಂಡಿರುವ ಕ್ಯಾಡೆಟ್‌ಗಳು ತರಬೇತಿ ಪೂರ್ಣಗೊಳಿಸಿದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಕಾಶ್ಮೀರ ಕಣಿವೆಯ 26 ಅಭ್ಯರ್ಥಿಗಳೂ ಸೇರಿದಂತೆ ಒಟ್ಟು 152 ಅಭ್ಯರ್ಥಿಗಳು 6 ತಿಂಗಳ ಕಠಿಣ ತರಬೇತಿ ಪೂರ್ಣಗೊಳಿಸಿ ಜೆಎಕೆಎಲ್‌ಐನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News