ಕೇರಳ: ಲೋಕಸಭಾ ಚುನಾವಣೆಗೆ ಸಿಪಿಎಂ ಅಭ್ಯರ್ಥಿಗಳ ಪಟ್ಟಿ ಪ್ರಕಟ

Update: 2019-03-09 17:52 GMT

ತಿರುವನಂತಪುರಂ, ಮಾ.9: ಲೋಕಸಭಾ ಚುನಾವಣೆಗೆ ಕೇರಳ ಸಿಪಿಎಂನ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಶನಿವಾರ ಪ್ರಕಟಿಸಿದ್ದಾರೆ. ಇದರಲ್ಲಿ ಹಾಲಿ 6 ಸಂಸದರು ಹಾಗೂ 4 ಶಾಸಕರು ಸ್ಥಾನ ಪಡೆದಿದ್ದಾರೆ.

ಕೇರಳದ 20 ಲೋಕಸಭಾ ಸ್ಥಾನಗಳಲ್ಲಿ ಸಿಪಿಎಂ 16ರಲ್ಲಿ, ಸಿಪಿಐ 4ರಲ್ಲಿ ಸ್ಪರ್ಧಿಸಲಿದೆ. ಸಿಪಿಎಂ ಪಟ್ಟಿಯಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟದ ಇತರ ಪಕ್ಷಗಳಿಗೆ ಯಾವುದೇ ಸ್ಥಾನ ಬಿಟ್ಟುಕೊಡದಿರುವುದು ಗಮನಾರ್ಹವಾಗಿದೆ.

ಚಾಲಕ್ಕುಡಿಯಿಂದ ಇನ್ನೊಸೆಂಟ್, ಇಡುಕ್ಕಿಯಿಂದ ಜಾಯ್ಸಿ ವರ್ಗಿಸ್, ಪಾಲಕ್ಕಾಡ್‌ನಿಂದ ಎಂಬಿ ರಾಜೇಶ್, ಅಲತ್ತೂರ್‌ನಿಂದ ಪಿಕೆ ಬಿಜು, ಅಟ್ಟಿಂಗಲ್‌ನಿಂದ ಎ ಸಂಪತ್, ಕಣ್ಣೂರಿನಿಂದ ಪಿಕೆ ಶ್ರೀಮತಿ ಇವರು ಹಾಲಿ ಸಂಸದರಾಗಿದ್ದು, ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಮರು ಸ್ಪರ್ಧೆಗೆ ಇಳಿಯಲಿದ್ದಾರೆ. ಅಲಪ್ಪುಳದಿಂದ ಆರಿಫ್, ಪಟ್ಟಣಂಥಿಟ್ಟದಿಂದ ವೀಣಾ ಜಾರ್ಜ್, ಕೋಝಿಕೋಡ್‌ನಿಂದ ಎ.ಪ್ರದೀಪ್ ಕುಮಾರ್, ಪೊನ್ನಾಣಿಯಿಂದ ಪಿವಿ ಅನ್ವರ್- ಈ ನಾಲ್ವರು ಶಾಸಕರೂ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎಂದು ಬಾಲಕೃಷ್ಣನ್ ತಿಳಿಸಿದ್ದಾರೆ. ಸಿಪಿಐಯಿಂದ ಹಾಲಿ ಶಾಸಕರಾದ ದಿವಾಕರನ್ ಮತ್ತು ಚಿತ್ತಾಯಂ ಗೋಪಕುಮಾರ್ ಕ್ರಮವಾಗಿ ತಿರುವನಂತಪುರಂ ಹಾಗೂ ಮಾವೇಲಿಕ್ಕರ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯಲಿದ್ದರೆ ಪಿಪಿ ಸುನೀರ್ ವಯನಾಡ್ ಹಾಗೂ ರಾಜಾಜಿ ಮ್ಯಾಥ್ಯೂ ಥೋಮಸ್ ತ್ರಿಶ್ಯೂರ್‌ನಿಂದ ಸ್ಪರ್ಧಿಸಲಿದ್ದಾರೆ.

ಬಿಜೆಪಿಯು ಮಿಝೊರಾಂನ ರಾಜ್ಯಪಾಲರಾಗಿದ್ದ ಕುಮ್ಮನಮ್ ರಾಜಶೇಖರನ್‌ರನ್ನು ತಿರುವನಂತಪುರಂನಿಂದ ಸ್ಪರ್ಧೆಗೆ ಇಳಿಸಿದರೆ ಅದರಿಂದ ಯಾವುದೇ ಪರಿಣಾಮವಾಗದು ಎಂದು ಬಾಲಕೃಷ್ಣನ್ ಹೇಳಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 12 ಸ್ಥಾನ ಗೆದ್ದಿದ್ದರೆ, ಎಲ್‌ಡಿಎಫ್ ಮೈತ್ರಿಕೂಟ 8ರಲ್ಲಿ ಗೆದ್ದಿತ್ತು. ಬಿಜೆಪಿ ರಾಜ್ಯದಲ್ಲಿ ಖಾತೆ ತೆರೆಯಲು ವಿಫಲವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News