ಹಾಂಗ್ ವಿಶ್ವ ದಾಖಲೆ: 50 ಕಿ.ಮೀ. ನಡಿಗೆ
ಹ್ವಾಂಗ್‌ಶಾನ್, ಮಾ.9: ರಿಯೋ ಒಲಿಂಪಿಕ್ಸ್‌ನ ರೇಸ್ ವಾಕ್ ಚಾಂಪಿಯನ್ ಲಿಯು ಹಾಂಗ್ 50 ಕಿ.ಮೀ. ನಡಿಗೆಯಲ್ಲಿ ವಿಶ್ವ ದಾಖಲೆ ಮುರಿದಿದ್ದು ನಾಲ್ಕು ಗಂಟೆಯೊಳಗೆ ಗುರಿ ತಲುಪಿದ ಮೊದಲ ಮಹಿಳಾ ಅಥ್ಲೀಟ್ ಆಗಿದ್ದಾರೆಂದು ಅಂತರ್‌ರಾಷ್ಟ್ರೀಯ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ಸ್(ಐಎಎಎಫ್)ತಿಳಿಸಿದೆ.
ಬ್ರೆಝಿಲ್‌ನ ರಿಯೋ ಡಿ ಜನೈರೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ 20 ಕಿ.ಮೀ.ನಡಿಗೆ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿರುವ ಚೀನಾದ ಲಿಯು ಶನಿವಾರ ಇಲ್ಲಿ ನಡೆದ 50 ಕಿ.ಮೀ. ನಡಿಗೆಯಲ್ಲಿ ಮೂರು ಗಂಟೆ, 59 ನಿಮಿಷ ಹಾಗೂ 15 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಕಳೆದ ವರ್ಷ ಟೈಕಾಂಗ್‌ನಲ್ಲಿ ತಮ್ಮದೇ ದೇಶದ ಲಿಯಾಂಗ್ ರುಯ್ ನಿರ್ಮಿಸಿದ್ದ ದಾಖಲೆ(4:04:36)ಯನ್ನು ಐದಕ್ಕೂ ಅಧಿಕ ನಿಮಿಷಗಳ ಅಂತರದಿಂದ ಹಿಂದಿಕ್ಕಿದರು ಎಂದು ಐಎಎಎಫ್ ತಿಳಿಸಿದೆ.
31ರ ಹರೆಯದ ಲಿಯು ಹಾಂಗ್ ಇದೀಗ 20 ಕಿ.ಮೀ. ಹಾಗೂ 50 ಕಿ.ಮೀ. ನಡಿಗೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಸಾಧನೆ ಮಾಡಿದ್ದಾರೆ. ಲಿಯು 2015ರಲ್ಲಿ ಸ್ಪೇನ್‌ನಲ್ಲಿ ನಡೆದ 20 ಕಿ.ಮೀ. ನಡಿಗೆಯಲ್ಲಿ 1:24:38 ಸೆಕೆಂಡ್‌ನಲ್ಲಿ ಗುರಿ ತಲುಪಿ ದಾಖಲೆ ನಿರ್ಮಿಸಿದ್ದರು. ಲಿಯು 2011 ಹಾಗೂ 2015ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ 20 ಕಿ.ಮೀ. ನಡಿಗೆಯಲ್ಲಿ ಚಿನ್ನ ಜಯಿಸಿದ್ದಾರೆ.