×
Ad

ಶಿವ, ಸಚಿನ್ ಸೆಮಿ ಫೈನಲ್‌ಗೆ ಪ್ರವೇಶ

Update: 2019-03-09 23:29 IST

ಹೊಸದಿಲ್ಲಿ, ಮಾ.9: ಮೂರು ಬಾರಿ ಏಶ್ಯನ್ ಗೇಮ್ಸ್‌ನಲ್ಲಿ ಪದಕ ವಿಜೇತ ಶಿವ ಥಾಪ(60ಕೆಜಿ) ಹಾಗೂ ಮಾಜಿ ಯೂತ್ ವರ್ಲ್ಡ್ ಚಾಂಪಿಯನ್ ಸಚಿನ್ ಸಿವಾಚ್(52ಕೆಜಿ)ಸಹಿತ ಭಾರತದ ಆರು ಬಾಕ್ಸರ್‌ಗಳು 38ನೇ ಆವೃತ್ತಿಯ ಜೀಬಿ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದಾರೆ. ಫಿನ್‌ಲ್ಯಾಂಡ್‌ನ ಹೆಲ್ಸಿಂಕಿಯಲ್ಲಿ ಶುಕ್ರವಾರ ರಾತ್ರಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಥಾಪ ಪೊಲೆಂಡ್‌ನ ಡೊಮಿನಿಕ್ ಪಾಲಕ್‌ರನ್ನು 5-0 ಅಂತರದಿಂದ ಮಣಿಸಿದರು. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಥಾಪ ಸೆಮಿ ಫೈನಲ್‌ನಲ್ಲಿ ರಶ್ಯದ ಮಿಖೈಲ್ ವರ್ಲಾಮೊವ್‌ರನ್ನು ಎದುರಿಸಲಿದ್ದಾರೆ.

ಸಚಿನ್ ಸಿವಾಚ್ ಮತ್ತೊಂದು ಎರಡನೇ ಸುತ್ತಿನ ಪಂದ್ಯದಲ್ಲಿ ರಶ್ಯದ ತಮಿರ್ ಗಲನೊವ್‌ರನ್ನು 4-1 ಅಂತರದಿಂದ ಸೋಲಿಸಿದರು. 20ರ ಹರೆಯದ ಸಚಿನ್ ಮುಂದಿನ ಸುತ್ತಿನಲ್ಲಿ ಕಿರ್ಗಿಸ್ತಾನದ ಅಝತ್ ಉಸೆನಲಿವ್ ಸವಾಲು ಎದುರಿಸಲಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತ ಮುಹಮ್ಮದ್ ಹಸ್ಸಮುದ್ದೀನ್(56ಕೆಜಿ), ಕವಿಂದರ್ ಸಿಂಗ್ ಬಿಷ್ಟ್(56ಕೆಜಿ),ದಿನೇಶ್ ದಾಗಾರ್(69ಕೆಜಿ) ಹಾಗೂ ನವೀನ್ ಕುಮಾರ್(+91ಕೆಜಿ)ಅಂತಿಮ-4ರ ಹಂತ ತಲುಪಿದ್ದಾರೆ.

ಇದಕ್ಕೂ ಮೊದಲು ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಸುಮಿತ್ ಸಾಂಗ್ವಾನ್(91ಕೆಜಿ) ಹಾಗೂ ಗೋವಿಂದ್ ಸಹಾನಿ(49ಕೆಜಿ)ಸೆಮಿ ಫೈನಲ್‌ಗೆ ತಲುಪಿದ್ದಾರೆ. ಹಸ್ಸಮುದ್ದೀನ್ ರಶ್ಯದ ಒವಿಕ್ ಒಗಾನ್ನಿಸಿಯನ್‌ರನ್ನು 5-0 ಅಂತರದಿಂದ ಸೋಲಿಸಿದ್ದು ಮುಂದಿನ ಸುತ್ತಿನಲ್ಲಿ ಕಝಕ್‌ಸ್ತಾನದ ಝನ್‌ಬೊಲಟ್‌ರನ್ನು ಎದುರಿಸಲಿದ್ದಾರೆ. ಬಾಟಮ್‌ವೇಟ್‌ನ 52 ಕೆಜಿ ತೂಕ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಬಿಷ್ಟ್ ಕಿರ್ಗಿಸ್ತಾನದ ಅಲ್ಮನ್‌ಬೆಟ್ ಅಲಿಬೆಕೊವ್‌ರನ್ನು ಸೋಲಿಸಿದರು. ಬಿಷ್ಟ್ ಮುಂದಿನ ಸುತ್ತಿನಲ್ಲಿ ಫ್ರಾನ್ಸ್‌ನ ಜೋರ್ಡನ್ ರೊಡ್ರಿಗಝ್‌ರನ್ನು ಎದುರಿಸಲಿದ್ದಾರೆ.

ದಿನೇಶ್ ದಾಗಾರ್ ಫಿನ್‌ಲ್ಯಾಂಡ್‌ನ ಅಯ್ದಿನ್ ಬೆಹರುಝ್‌ರನ್ನು 3-2 ಅಂತರದಿಂದ ಸೋಲಿಸಿ ಉತ್ತಮ ಪ್ರದರ್ಶನ ಮುಂದುವರಿಸಿದರು. ಸೆಮಿ ಫೈನಲ್‌ನಲ್ಲಿ ರಶ್ಯದ ಸೆರ್ಗಿ ಸೊಬಿಲಿನ್‌ಸ್ಕಿ ಅವರನ್ನು ಎದುರಿಸಲಿದ್ದಾರೆ.

+91ಕೆಜಿ ವಿಭಾಗದಲ್ಲಿ ನವೀನ್ ಕುಮಾರ್ ಸ್ಥಳೀಯ ಫೇವರಿಟ್ ಅಂಟ್ಟಿ ಲೆಹ್‌ಮುಸ್ವಿರ್ಪಿ ಅವರನ್ನು ಸೋಲಿಸಿದರು.

ಈ ಟೂರ್ನಮೆಂಟ್‌ನಲ್ಲಿ 15 ದೇಶಗಳ ಸುಮಾರು 100 ಬಾಕ್ಸರ್‌ಗಳು ಭಾಗವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News