ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸದೆ ಅದಾನಿಗೆ 6 ವಿಮಾನ ನಿಲ್ದಾಣ ಲೀಸ್!

Update: 2019-03-10 10:18 GMT

ಹೊಸದಿಲ್ಲಿ, ಮಾ.10: ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರ ನಿರ್ವಹಿಸುತ್ತಿದ್ದ ದೇಶದ ಆರು ವಿಮಾನ ನಿಲ್ದಾಣಗಳನ್ನು ಲೀಸ್ ಆಧಾರದಲ್ಲಿ ಅದಾನಿ ಎಂಟರ್‍ಪ್ರೈಸಸ್‍ ಗೆ ನೀಡಿರುವ ಕ್ರಮ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ವಿಮಾನ ನಿಲ್ದಾಣ ಹಸ್ತಾಂತರಕ್ಕೆ ಮುನ್ನ ರಾಜ್ಯಗಳು ಮತ್ತು ಸಾರ್ವಜನಿಕರ ಜತೆ ನಡೆಸಬೇಕಾದ ಕಡ್ಡಾಯ ಸಮಾಲೋಚನೆಯನ್ನು ನಡೆಸಿಲ್ಲ ಎಂದು ರಾಜ್ಯಸಭೆಯ ಸಮಿತಿಗೆ ನಾಗರಿಕ ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ ಎಂದು timesofindia ವರದಿ ಮಾಡಿದೆ.

ಕೊಲ್ಕತ್ತಾ ನಿವಾಸಿ ಸಪ್ತರ್ಷಿ ದೇವ್ ಸಹಿ ಮಾಡಿರುವ ಅಹವಾಲನ್ನು ರಾಜ್ಯಸಭೆ ಸಮಿತಿ ವಿಚಾರಣೆ ನಡೆಸುತ್ತಿದ್ದು, ಈ ಸಂಬಂಧ ಕಳೆದ ವರ್ಷದ ಡಿಸೆಂಬರ್ 27 ಹಾಗೂ 28ರಂದು ನಡೆದ ಎರಡು ಸಭೆಗಳಲ್ಲಿ, ಲೀಸ್ ಆಧಾರದಲ್ಲಿ ವಿಮಾನ ನಿಲ್ದಾಣಗಳನ್ನು ನೀಡುವ ಮುನ್ನ ಸಮಾಲೋಚನೆ ನಡೆದಿಲ್ಲ ಎಂದು ಹೇಳಿದೆ. ಲಕ್ನೋ, ತಿರುವನಂತಪುರಂ, ಜೈಪುರ, ಅಹ್ಮದಾಬಾದ್, ಗುವಾಹಟಿ ಹಾಗೂ ಮಂಗಳೂರು ವಿಮಾನ ನಿಲ್ದಾಣಗಳನ್ನು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ, ಕಾರ್ಯಾಚರಣೆ ನಡೆಸುವ ಮತ್ತು ನಿರ್ವಹಿಸಲು ಅದಾನಿ ಕಂಪನಿಗೆ ನೀಡಲಾಗಿದೆ.

ಇದರ ಜತೆಗೆ ಸಮಿತಿ, ಪಿಪಿಪಿ ಆಧಾರದ ಮತ್ತು ಖಾಸಗಿಯವರು ಕಾರ್ಯಾಚರಣೆ ಮಾಡುವ ವಿಮಾನ ನಿಲ್ದಾಣಗಳ ವೆಚ್ಚ- ಲಾಭದ ವಿಶ್ಲೇಷಣೆಯ ಬಗೆಗೂ ವಿಚಾರಣೆ ನಡೆಸುತ್ತಿದೆ. ಪರಿಣಾಮಕಾರಿ ಸೇವೆ ನೀಡುವ ನಿಟ್ಟಿನಲ್ಲಿ ಪಿಪಿಪಿ ಮಾದರಿ ಅತ್ಯುತ್ತಮ ಎಂದು ಸಚಿವಾಲಯ ವಾದ ಮುಂದಿಟ್ಟಿದೆ ಎಂದು ತಿಳಿದುಬಂದಿದೆ. ಆದರೆ ಇದಕ್ಕೆ ಮುನ್ನ ಸಾರ್ವಜನಿಕರು ಹಾಗೂ ರಾಜ್ಯಗಳ ಜತೆ ಸಮಾಲೋಚನೆ ನಡೆಸಿಲ್ಲ ಎಂದು ಒಪ್ಪಿಕೊಂಡಿದೆ.

ಇದಕ್ಕೆ ಪ್ರತಿಯಾಗಿ ಕೇರಳ ಸರ್ಕಾರ ಈಗಾಗಲೇ ಸಚಿವಾಲಯಕ್ಕೆ ತಮ್ಮ ಆಕ್ಷೇಪ ಸಲ್ಲಿಸಿ, ತಿರುವನಂತಪುರ ವಿಮಾನ ನಿಲ್ದಾಣದ ನಿರ್ವಹಣೆಯ ಹಕ್ಕನ್ನು ತಿರಸ್ಕರಿಸುವ ಪ್ರಸ್ತಾವವನ್ನು ಮುಂದಿಟ್ಟಿದೆ. ಆದರೆ ಇತರ ರಾಜ್ಯಗಳು ಇಂಥ ಪ್ರಸ್ತಾವ ಸಲ್ಲಿಸಿಲ್ಲ ಎನ್ನಲಾಗಿದೆ. ಆದರೆ ವಿಮಾನಯಾನ ಸಚಿವಾಲಯ ಈ ಸಂಬಂಧದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News