ಮೊಹಾಲಿಯಲ್ಲಿ ಮುಗ್ಗರಿಸಿದ ಕೊಹ್ಲಿ ಬಳಗ: ಸರಣಿ ಸಮಬಲಗೊಳಿಸಿದ ಆಸೀಸ್

Update: 2019-03-10 16:18 GMT

ಮೊಹಾಲಿ, ಮಾ.10: ಗರಿಷ್ಠ ಮೊತ್ತದ ಹಣಾಹಣಿಯಲ್ಲಿ ಪೀಟರ್ ಹ್ಯಾಂಡ್ಸ್‌ಕಾಂಬ್ ಚೊಚ್ಚಲ ಶತಕ(117),ಉಸ್ಮಾನ್ ಖ್ವಾಜಾ(91) ಹಾಗೂ ಟರ್ನರ್(ಔಟಾಗದೆ 84)ಅರ್ಧಶತಕದ ಕೊಡುಗೆ ನೆರವಿನಿಂದ ಆಸ್ಟ್ರೇಲಿಯ ತಂಡ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತವನ್ನು 4 ವಿಕೆಟ್‌ಗಳಿಂದ ರೋಚಕವಾಗಿ ಮಣಿಸಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯ 5 ಪಂದ್ಯಗಳ ಸರಣಿಯಲ್ಲಿ 2-2 ರಿಂದ ಸಮಬಲ ಸಾಧಿಸಿದೆ.

 ಗೆಲ್ಲಲು ಕಠಿಣ ಸವಾಲು ಪಡೆದ ಆಸ್ಟ್ರೇಲಿಯದ ಪರ ಚೊಚ್ಚಲ ಅರ್ಧಶತಕ ಸಿಡಿಸಿದ ಮಧ್ಯಮ ಕ್ರಮಾಂಕದ ದಾಂಡಿಗ ಟರ್ನರ್ ಹೆಸರಿಗೆ ತಕ್ಕಂತೆ ಪಂದ್ಯಕ್ಕೆ ಟರ್ನ್ ನೀಡಿದರು. ವಿಕೆಟ್‌ಕೀಪರ್ ಅಲೆಕ್ಸ್ ಕಾರೆಯೊಂದಿಗೆ(21) ಆರನೇ ವಿಕೆಟ್‌ಗೆ ಜೊತೆಯಾಟದಲ್ಲಿ 86 ರನ್ ಸೇರಿಸಿ ಆಸ್ಟ್ರೇಲಿಯಕ್ಕೆ ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ ಅನಿರೀಕ್ಷಿತ ಗೆಲುವು ತಂದುಕೊಟ್ಟರು. ಆಸ್ಟ್ರೇಲಿಯ 47.5 ಓವರ್‌ಗಳಲ್ಲಿ 6 ವಿಕೆಟ್‌ಗೆ 359 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು. ಪಂಜಾಬ್ ಕ್ರಿಕೆಟ್ ಸ್ಟೇಡಿಯಂನ ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಟಾಸ್ ಜಯಿಸಿದ ನಾಯಕ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಕಳಪೆ ಫಾರ್ಮ್‌ನಿಂದಾಗಿ ಟೀಕೆಗೆ ಗುರಿಯಾಗಿದ್ದ ಆರಂಭಿಕ ಜೋಡಿ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿ ಭಾರತ 9 ವಿಕೆಟ್ ನಷ್ಟಕ್ಕೆ 358 ರನ್ ಗಳಿಸಲು ಕಾರಣರಾದರು.

ಆಸೀಸ್ 3.3 ಓವರ್‌ಗಳಲ್ಲಿ 12 ರನ್‌ಗೆ 2 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ಜೊತೆಯಾದ ಖ್ವಾಜಾ(91,99 ಎಸೆತ, 7 ಬೌಂಡರಿ)ಹಾಗೂ ಹ್ಯಾಂಡ್ಸ್‌ಕಾಂಬ್(117,105 ಎಸೆತ, 8 ಬೌಂಡರಿ, 3 ಸಿಕ್ಸರ್)3ನೇ ವಿಕೆಟ್‌ಗೆ 192 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 204ಕ್ಕೆ ತಲುಪಿಸಿ ಆಸೀಸ್‌ನ ರನ್ ಚೇಸಿಂಗ್‌ಗೆ ಬಲ ನೀಡಿದರು. ಖ್ವಾಜಾ ವಿಕೆಟ್ ಉರುಳಿಸಿದ ಬುಮ್ರಾ ಈ ಜೋಡಿಯನ್ನು ಬೇರ್ಪಡಿಸಿದರು.

ಖ್ವಾಜಾ ಔಟಾದ ಬಳಿಕ ದೃತಿಗೆಡದ ಹ್ಯಾಂಡ್ಸ್‌ಕಾಂಬ್ 92 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ನೆರವಿನಿಂದ ಚೊಚ್ಚಲ ಶತಕ ಸಿಡಿಸಿದರು.

ಮ್ಯಾಕ್ಸ್‌ವೆಲ್ 23 ರನ್‌ಗೆ ಔಟಾದಾಗ ಕ್ರೀಸ್ ಆಕ್ರಮಿಸಿಕೊಂಡ ಟರ್ನರ್, ಹ್ಯಾಂಡ್ಸ್‌ಕಾಂಬ್‌ರೊಂದಿಗೆ 5ನೇ ವಿಕೆಟ್‌ಗೆ 42 ರನ್ ಜೊತೆಯಾಟ ನಡೆಸಿ ತಂಡಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದರು.

ಶತಕವೀರ ಹ್ಯಾಂಡ್ಸ್‌ಕಾಂಬ್ 42ನೇ ಔಟಾದಾಗ ಕಾರೆ ಅವರೊಂದಿಗೆ ಕೈಜೋಡಿಸಿದ ಟರ್ನರ್ ಮಿಂಚಿನ ವೇಗದಲ್ಲಿ ರನ್ ಸೇರಿಸಿ ಆಸ್ಟ್ರೇಲಿಯಕ್ಕೆ ಮೊಹಾಲಿಯಲ್ಲಿ ಗೆಲುವಿನ ಹಾರ ತೊಡಿಸಿದರು.

ಭಾರತದ ಪರ ಜಸ್‌ಪ್ರೀತ್ ಬುಮ್ರಾ 63ಕ್ಕೆ 3 ವಿಕೆಟ್ ಪಡೆದರು. ಹಲವು ಕ್ಯಾಚ್ ಕೈಚೆಲ್ಲಿದ ಭಾರತಕ್ಕೆ ಕಳಪೆ ಫೀಲ್ಡಿಂಗ್ ಮುಳುವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News