ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ಬಸ್ ಸಂಚಾರ ನಿರ್ಬಂಧಕ್ಕೆ ವಿರೋಧ: ಆಟೋ ರಿಕ್ಷಾ ಚಾಲಕರಿಂದ ಪ್ರತಿಭಟನೆ

Update: 2019-03-11 07:15 GMT

ಬಂಟ್ವಾಳ, ಮಾ.11: ಬಿ.ಸಿ.ರೋಡ್ ಸರ್ವೀಸ್ ರಸ್ತೆಯಲ್ಲಿ ಖಾಸಗಿ, ಸರಕಾರಿ ಬಸ್ ಗಳ ಸಂಚಾರವನ್ನು ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಬಿ.ಸಿ‌.ರೋಡ್-ಕೈಕಂಬ ಆಟೋ ರಿಕ್ಷಾ ಚಾಲಕರು ಸೋಮವಾರ ಇಲ್ಲಿನ ಮೇಲ್ಸೆತುವೆಯಲ್ಲಿ ದಿಢೀರನೆ ಪ್ರತಿಭಟನೆ ನಡೆಸಿದರು.

ಈ ಮೊದಲು ವಿವಿಧೆಡೆಯಿಂದ ಎಲ್ಲ ಬಸ್ ಗಳು ಬಿ‌.ಸಿ.ರೋಡ್ ನ ಜಂಕ್ಷನ್ ಗೆ ಬಂದು ತೆರಳುತ್ತಿದ್ದವು‌. ಅದಲ್ಲದೆ, ಇಲ್ಲಿನ ಪಕ್ಕದಲ್ಲಿಯೇ ಆಟೋ ರಿಕ್ಷಾ ತಂಗುದಾಣ ಕಾರ್ಯಾಚರಿಸುತ್ತಿದ್ದು, ಇದರಿಂದ ಆಟೋ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲಕರವಾಗಿತ್ತು. ಆದರೆ, ಇದೀಗ ಯಾವುದೇ ಮಾಹಿತಿ ನೀಡದೇ ದಿಢೀರನೆ ಬಸ್‌ಗಳ  ಸಂಚಾರವನ್ನು ನಿರ್ಬಂಧಿಸಿರುವುದು ಸರಿಯಲ್ಲ. ಇದರಿಂದ ಆಟೋ ಚಾಲಕರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಆಟೊ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಆಟೊ‌ ಚಾಲಕರು ರಾಷ್ಟ್ರೀಯ ಹೆದ್ದಾರಿಯ ಮೆಲ್ಸೆತುವೆಯಲ್ಲಿ ಬರುತ್ತಿದ್ದ ಬಸ್‌ಗಳನ್ನು ತಡೆದು ನಿಲ್ಲಿಸಿ, ಬಿ.ಸಿ‌.ರೋಡಿನ ಸರ್ವೀಸ್ ರಸ್ತೆಯಲ್ಲಿ ಸಂಚರಿಸುವಂತೆ ಮುಂದಾದಾಗ ಪೊಲೀಸರು ತಡೆವೊಡ್ಡಿದ ಘಟನೆಯು ನಡೆಯಿತು.

ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಹಾಗೂ ಬಂಟ್ವಾಳ ಕ್ರೈಂ ಎಸ್ಸೈ ಸುಧಾಕರ್ ಜಿ‌. ತೋನ್ಸೆ ಧಾವಿಸಿ, ಆಟೊ ಚಾಲಕರೊಂದಿಗೆ ಮಾತುಕತೆ ನಡೆಸಿದರು.

ಬಸ್‌ಗಳ ಸಂಚಾರ ನಿರ್ಬಂಧಿಸಿದಕ್ಕೆ ಆಟೊ ಚಾಲಕರು ಒಮ್ಮತದಿಂದ ಆಕ್ಷೇಪ ವ್ಯಕ್ತಪಡಿಸಿದಾಗ, ಬಂಟ್ವಾಳ ಎಎಸ್ಪಿ ಅವರ ನಿರ್ದೇಶನ ಮೇರೆಗೆ ಬಿ.ಸಿ.ರೋಡ್ ಒಳರಸ್ತೆಯಲ್ಲಿ ಬಸ್ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಎಎಸ್ಪಿ ಅವರೊಂದಿಗೆ ಮಾತುಕತೆಗೆ ತೆರಳುವಂತೆ ಹಾಗೂ ಪ್ರತಿಭಟನೆಯನ್ನು ಕೈಬಿಡುವಂತೆ ಎಸ್ಸೈ ಸುಧಾಕರ್ ಆಟೋ ಚಾಲಕರಿಗೆ ತಿಳಿಸಿದಾಗ, ಪ್ರತಿಭಟನೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ದೂರಿನೊಂದಿಗೆ ಎಎಸ್ಪಿ ಕಚೇರಿಯತ್ತ ತೆರಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News