ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎನ್ನುವುದನ್ನು ಮೊಬೈಲ್ ಮೂಲಕವೇ ತಿಳಿಯುವುದು ಹೇಗೆ?

Update: 2019-03-11 08:54 GMT

ಮಂಗಳೂರು, ಮಾ.11: ನಿಮ್ಮಲ್ಲಿ ಮತದಾರರ ಗುರುತಿನ ಚೀಟಿ ಇದ್ದರೂ, ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಅತ್ಯಗತ್ಯವಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಮತ ಚಲಾಯಿಸಲು ಸಾಧ್ಯವಿಲ್ಲದ ಕಾರಣ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂಬುದನ್ನು ಖಾತರಿಪಡಿಸುವುದು ಬಹುಮುಖ್ಯ.

ಅದೀಗ ನಿಮ್ಮ ಆ್ಯಂಡ್ರಾಯ್ಡ್ ಮೊಬೈಲ್ ಫೋನ್ ಮೂಲಕ ಸಾಧ್ಯ. ನಿಮ್ಮ ಮೊಬೈಲ್‌ನಲ್ಲಿ ಪ್ಲೇಸ್ಟೋರ್ ಮೂಲಕ ‘‘ವೋಟರ್ ಹೆಲ್ಪ್‌ಲೈನ್’’ (Voter Helpline)  ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ನಿಮ್ಮ ಹೆಸರು, ತಂದೆ ಅಥವಾ ಗಂಡನ ಹೆಸರು, ವಯಸ್ಸು, ರಾಜ್ಯ ಸೇರಿದಂತೆ ಅಲ್ಲಿ ಕೇಳಲಾಗಿರುವ ಕೆಲವೊಂದು ಮಾಹಿತಿಗಳನ್ನು ಒದಗಿಸಿದರಷ್ಟೇ ಸಾಕು. ಕೆಲ ಕ್ಷಣಗಳಲ್ಲಿಯೇ ನಿಮ್ಮ ಗುರುತು ಚೀಟಿ ನಿಮ್ಮ ಮೊಬೈಲ್ ಸ್ಕ್ರೀನ್‌ನಲ್ಲಿ ಕಾಣಬಹುದು. ಒಂದು ವೇಳೆ ಮೊಬೈಲ್ ಆ್ಯಪ್‌ನ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದು ಖಾತರಿಯಾಗದಿದ್ದಲ್ಲಿ ಸಂಬಂಧಪಟ್ಟವರಲ್ಲಿ ವಿಚಾರಿಸಿಕೊಳ್ಳಬಹುದು. 1950 ಸಂಖ್ಯೆಗೆ ಉಚಿತವಾಗಿ ಕರೆ ಮಾಡುವ ಮೂಲಕವೂ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಖಾತರಿಪಡಿಸಿಕೊಳ್ಳಬಹುದು.

ಒಂದು ವೇಳೆ ಯಾವುದೋ ಕಾರಣಕ್ಕೆ ಹೆಸರು ಸೇರ್ಪಡೆಯಾಗದಿದ್ದಲ್ಲಿ ಅಥವಾ ಡಿಲೀಟ್ ಆಗಿದ್ದಲ್ಲಿ ಅರ್ಹ ಮತದಾರರು ಫಾರಂ ನಂ. 6ನ್ನು ಭರ್ತಿ ಮಾಡಿ ಬೂತ್ ಮಟ್ಟದ ಅಧಿಕಾರಿಗಳಿಗೆ ಸಲ್ಲಿಕೆ ಮಾಡಬಹುದು. ಮಾರ್ಚ್ 19ರವರೆಗೆ ಹೊಸ ಮತದಾರರಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸುದ್ದಿಗೋಷ್ಠಿಯಲ್ಲಿ ಸಷ್ಪಪಡಿಸಿದ್ದಾರೆ.

‘ಸಿ ವಿಜಿಲ್’ನಲ್ಲಿ ದೂರು ನೀಡುವಾಗ ಇರಲಿ ಎಚ್ಚರ!

ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆಗೆ ಅಡ್ಡಿಗೆ ಸಂಬಂಧಿಸಿ ನಾಗರಿಕರು ಸಿ ವಿಜಿಲ್ (cVIGIL) ಆ್ಯಪ್ ಮೂಲಕ ದೂರು ನೀಡಬಹುದು. ಆದರೆ ನಾಗರಿಕರು ನೀಡುವ ದೂರು ನಿಖರ ಹಾಗೂ ನೈಜವಾಗಿರಬೇಕು. ಫೋಟೋ ಅಥವಾ ವೀಡಿಯೋದ ಮೂಲಕವೂ ದೂರು ನೀಡಬಹುದು. ದೂರು ನೀಡಿದ 100 ನಿಮಿಷಗಳ ಒಳಗೆ ಕ್ರಮ ಕೈಗೊಳ್ಳುವ ಅಧಿಕಾರ ಸಂಬಂಧಪಟ್ಟವರದ್ದಾಗಿರುತ್ತದೆ. ದೂರು ನೈಜವಾಗಿರದಿದ್ದರೆ ದೂರು ಕೊಟ್ಟವರ ಮೇಲೆಯೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News