ದ.ಕ. ಜಿಲ್ಲೆಯಲ್ಲಿ 16,97,417 ಮತದಾರರು: ಸಸಿಕಾಂತ್ ಸೆಂಥಿಲ್

Update: 2019-03-11 11:22 GMT

ಮಂಗಳೂರು, ಮಾ.11: ದ.ಕ. ಜಿಲ್ಲೆಯಲ್ಲಿ 2019ರ ಜನವರಿ 16ರವರೆಗೆ 16,97417 ಮತದಾರರಿದ್ದಾರೆ. 2014ರ ಲೋಕಸಭಾ ಚುನಾವಣೆಗೆ ಈ ಮತದಾರರ ಸಂಖ್ಯೆ 15,64,114 ಆಗಿತ್ತು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಸದ್ಯದ ಮತದಾರರ ಪಟ್ಟಿಯಲ್ಲಿರುವವರಲ್ಲಿ 21,292 ಮತದಾರರು 18ರಿಂದ 19 ವರ್ಷ ವಯಸ್ಸಿನ ಯುವ ಮತದಾರರು ಎಂದರು. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಮತದಾರರ ಸಂಖ್ಯೆಯಲ್ಲಿ ಈ ಬಾರಿ 1,33,303 ಮತದಾರರು ಹೆಚ್ಚಳವಾಗಿದ್ದಾರೆ. ಈ ಮತದಾರರ ಪಟ್ಟಿಯಲ್ಲಿ ತೃತೀಯ ಲಿಂಗಿಗಳ ಸಂಖ್ಯೆ 99 ಎಂದು ಅವರು ಮಾಹಿತಿ ನೀಡಿದರು.

ಫೋಟೋ ವೋಟರ್ ಸ್ಲಿಪ್ (ವಿಪಿಎಸ್) ಗುರುತಿನ ಚೀಟಿಯಲ್ಲ!

ಈ ಬಾರಿ ಚುನಾವಣೆಯಲ್ಲಿ ಫೋಟೋ ವೋಟರ್ ಸ್ಲಿಪ್ ಗುರುತಿನ ಚೀಟಿಯಾಗಿ ಪರಿಗಣಿಸಲ್ಪಡುವುದಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಕಡ್ಡಾಯವಾಗಿರುವ ಜತೆಗೆ, ಮತದಾರರು ಮತದಾನದ ವೇಳೆ ಮತದಾರರ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗ ನಿಗದಿಪಡಿಸಿರುವ ಇತರ 11 ಗುರುತಿನ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಈ ಫೋಟೋ ವೋಟರ್ ಸ್ಲಿಪನ್ನು ಮತದಾರರ ಕ್ಷೇತ್ರದಲ್ಲಿ ಮತದಾನಕ್ಕೆ ಕನಿಷ್ಠ ಐದು ದಿನಗಳ ಮುಂಚಿತವಾಗಿ ವಿತರಿಸಲಾಗುವುದು ಜಿಲ್ಲಾಧಿಕಾರಿ ತಿಳಿಸಿದರು.

1,861 ಮತಗಟ್ಟೆಗಳು
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ದ.ಕ. ಜಿಲ್ಲೆಯಲ್ಲಿ 1,861 ಮತಗಟ್ಟೆಗಳು ಕಾರ್ಯ ನಿರ್ವಹಿಸಲಿವೆ. ಕಳೆದ ಚುನಾವಣೆಯಲ್ಲಿ ಮತಗಟ್ಟೆಗಳ ಸಂಖ್ಯೆ 1,790 ಆಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇದ್ದಂತೆಯೇ ಮತಗಟ್ಟೆಗಳಲ್ಲಿ ಕನಿಷ್ಠ ಖಾತರಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಕುಡಿಯುವ ನೀರು, ತಂಗುದಾಣ, ಶೌಚಾಲಯ ಹಾಗೂ ವಿಕಲಚೇತನರಿಗೆ ಅನುಕೂಲವಾಗುವಂತೆ ರ್ಯಾಂಪ್ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.

ಇವಿಎಂ ಯಂತ್ರಗಳ ಜತೆ ಈ ಬಾರಿಯೂ ವಿವಿ ಪ್ಯಾಟ್‌ಗಳನ್ನು ಉಪಯೋಗಿಸಲಾಗುತ್ತಿದ್ದು, ನಿಗದಿಗಿಂತಲೂ ಹೆಚ್ಚುವರಿ ಯಂತ್ರಗಳು ಲಭ್ಯವಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಈ ಯಂತ್ರಗಳ ಪ್ರಥಮ ಹಂತದ ಪರಿಶೀಲನೆ ನಡೆಸಲಾಗಿದೆ. ಜಿಪಿಎಸ್‌ವ್ಯವಸ್ಥೆಯ ಮೂಲಕ ಇವಿಎಂ ಹಾಗೂ ವಿವಿ ಪ್ಯಾಟ್‌ಗಳ ಚಲನವಲದ ಕುರಿತಂತೆ ಮಾಹಿತಿಯು ಲಭ್ಯವಾಗಲಿದೆ ಎಂದು ಅವರು ಹೇಳಿದರು.

ಖಾಸಗಿ ಸ್ಥಳಗಳಲ್ಲಿ ಬ್ಯಾನರ್, ಫ್ಲೆಕ್ಸ್ ತೆರವುಗೊಳಿಸಿ

ಚುನಾವಣಾ ನೀತಿ ಸಂಹಿತೆಗೆ ಅನುಗುಣವಾಗಿ ಈಗಾಗಲೇ ಜಿಲ್ಲಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಹಾಕಲಾಗಿರುವ ಬ್ಯಾನರ್, ಪೋಸ್ಟರ್, ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಕಾರ್ಯ ಆರಂಭವಾಗಿದೆ. ಸಾರ್ವಜನಿಕ ಸ್ಥಳ, ಪ್ರದೇಶಗಳಲ್ಲಿ ಕಾನೂನುಬಾಹಿರ ಪೋಸ್ಟರ್, ಬ್ಯಾನರ್ ಅಳವಡಿಸುವಂತಿಲ್ಲ. ಖಾಸಗಿ ಸ್ಥಳಗಳಲ್ಲಿ ಹಾಕಲಾಗಿರುವ ಬ್ಯಾನರ್ ಪೋಸ್ಟರ್‌ಗಳನ್ನೂ ಸಂಬಂಧಪಟ್ಟವರು ತೆರವುಗೊಳಿಸಬೇಕು. ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆಯೂ ಸ್ಥಳೀಯ ಸಂಸ್ಥೆಗಳ ಅನುಮತಿಯನ್ನು ಪಡೆಯಬೇಕಾಗುತ್ತದೆ. ಸಂಬಂಧಪಟ್ಟವರು ತೆರವುಗೊಳಿಸದಿದ್ದರೆ 24 ಗಂಟೆಯೊಳಗೆ ನಾವೇ ತೆರೆವುಗೊಳಿಸುತ್ತೇವೆ ಎಂದು ಜಿಲ್ಲಾಧಿಕಾರಿ ನುಡಿದರು.

ಧ್ವನಿವರ್ಧಕ ಬಳಕೆಗೆ ನಿರ್ಬಂಧ

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳ ಬಳಕೆಗೂ ನಿರ್ಬಂಧವಿರುತ್ತದೆ. ಅಭ್ಯರ್ಥಿಯ ಚುನಾವಣಾ ಖರ್ಚುವೆಚ್ಚಗಳನ್ನು ಪರಿಶೀಲಿಸಲು ಜಿಲ್ಲೆಲ್ಲಿ 73 ಫ್ಲೈಯಿಂಗ್ ಸ್ಕ್ವಾಡ್ ತಂಡಗಳು, 62 ಮೇಲ್ವಿಚಾರಣಾ ತಂಡಗಳು, 25 ವೀಡಿಯೊ ಮೇಲ್ವಿಚಾರಣಾ ತಂಡಗಳು ಕಾರ್ಯನಿರ್ವಹಿಸುತ್ತವೆ ಎಂದು ಅವರು ತಿಳಿಸಿದರು.

ಖಾಸಗಿ ಕಾರ್ಯಕ್ರಮಗಳ ಬಗ್ಗೆ ಆತಂಕ ಬೇಡ

ಮದುವೆ, ನಿಶ್ಚಿತಾರ್ಥ, ಹುಟ್ಟುಹಬ್ಬ, ಧಾರ್ಮಿಕ ಸಮಾರಂಭ ಸೇರಿದಂತೆ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ನಡೆಸುವವರು ಆತಂಕಪಡಬೇಕಾಗಿಲ್ಲ. ಆದರೆ ಸಾರ್ವಜನಿಕವಾಗಿ ಊಟೋಪಚಾರದ ವ್ಯವಸ್ಥೆ ಮಾಡಿ ಕಾರ್ಯಕ್ರಮಗಳನ್ನು ಆಯೋಜಿಸುವುದಾದರೆ, ಚುನಾವಣಾ ಆಯೋಗದ ಗಮನಕ್ಕೆ ತಂದು ಅನುಮತಿ ಪಡೆದುಕೊಳ್ಳುವುದು ಸೂಕ್ತ. ಯಾಕೆಂದರೆ, ಇಂತಹ ಕಾರ್ಯಕ್ರಮಗಳನ್ನು ರಾಜಕೀಯ ಪಕ್ಷ ಅಥವಾ ವ್ಯಕ್ತಿ ಮತದಾರರ ಓಲೈಕೆಗೆ ಬಳಸಿಕೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆಯೋಗದ ನಿರ್ದೇಶನದಂತೆ ಅನುಮತಿ ಪಡೆದುಕೊಂಡು ಕಾರ್ಯಕ್ರಮ ನಡೆಸಿದ್ದಲ್ಲಿ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಗಮನಹರಿಸಬೇಕು.

ಚುನಾವಣೆಯ ಸಂದರ್ಭ ಹಣ ವರ್ಗಾವಣೆ ಅಥವಾ ನಗದನ್ನು ಕೊಂಡೊಯ್ಯುವ ಬಗ್ಗೆ ನಿಗಾ ಇರಿಸಲಾಗುತ್ತದೆ. ಆದರೆ ಹಣ ಚುನಾವಣೆಗೆ ಸಂಬಂಧಿಸಿದ್ದಲ್ಲವಾಗಿದ್ದಲ್ಲಿ ಸೂಕ್ತ ದಾಖಲೆಗಳನ್ನು ಒದಗಿಸಿದರೆ, 24 ಗಂಟೆಗಳೊಳಗೆ ಆ ಹಣವನ್ನು ರಿಲೀಸ್ ಮಾಡುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಅಭ್ಯರ್ಥಿಯು 10,000 ರೂ.ಗಿಂತ ಅಧಿಕ ಮೊತ್ತದ ವರ್ಗಾವಣೆಯ ಬಗ್ಗೆ ಆಯೋಗ ನಿಗಾ ಇರಿಸುತ್ತದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News