×
Ad

ಆರ್‌ಬಿಐಯ ಅನುಮೋದನೆಗೆ ಮೊದಲೇ ನೋಟು ರದ್ದತಿ ಘೋಷಿಸಿದ್ದ ಮೋದಿ!

Update: 2019-03-11 20:41 IST

ಹೊಸದಿಲ್ಲಿ, ಮಾ.11: ರಿಸರ್ವ್ ಬ್ಯಾಂಕ್‌ನ ಕೇಂದ್ರ ಸಮಿತಿಯ ಔಪಚಾರಿಕ ಅನುಮೋದನೆ ಪಡೆಯುವ ಮೊದಲೇ ಅಧಿಕ ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಪ್ರಧಾನಿ ಮೋದಿ ಘೋಷಿಸಿದ್ದರು ಎಂದು ಮಾಹಿತಿ ಹಕ್ಕು ಅರ್ಜಿಯಿಂದ ತಿಳಿದು ಬಂದಿದೆ. 500 ಹಾಗೂ 1000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದುಗೊಳಿಸುವುದಾಗಿ 2016ರ ನವೆಂಬರ್ 8ರಂದು ಮೋದಿ ಘೋಷಿಸಿದ್ದರು. ನವೆಂಬರ್ 6ರಂದು ಊರ್ಜಿತ್ ಪಟೇಲ್ ನೇತೃತ್ವದ ಆರ್‌ಬಿಐ ಕೇಂದ್ರ ಸಮಿತಿ ಕೇವಲ ಎರಡೂವರೆ ಗಂಟೆಯ ಸಭೆ ನಡೆಸಿತ್ತು. ಈ ನಿರ್ಧಾರ ಪ್ರಶಂಸನೀಯವಾಗಿದ್ದರೂ ಹಾಲಿ ವರ್ಷದ ಜಿಡಿಪಿ ಮೇಲೆ ಕಿರು ಅವಧಿಯ ನಕಾರಾತ್ಮಕ ಪರಿಣಾಮಕ್ಕೆ ಕಾರಣವಾಗಲಿದೆ ಎಂದು ಬ್ಯಾಂಕ್‌ನ ನಿರ್ದೇಶಕರು ಹೇಳಿದ್ದರು. ಸಭೆಯ ನಿರ್ಣಯಕ್ಕೆ ಆರ್‌ಬಿಐ ಗವರ್ನರ್ 2016ರ ಡಿಸೆಂಬರ್ 15ರಂದು ಸಹಿ ಹಾಕಿದ್ದರು.

ಆರ್‌ ಬಿಐ ಹಾಲಿ ಗವರ್ನರ್ ಶಕ್ತಿಕಾಂತ ದಾಸ್ ಅವರೂ ನಿರ್ದೇಶಕರಾಗಿದ್ದ ಆಡಳಿತ ಸಮಿತಿಯು ನೋಟು ರದ್ದತಿಯಿಂದ ಕಪ್ಪು ಹಣದ ಹಾವಳಿ ನಿಯಂತ್ರಣಕ್ಕೆ ಅಥವಾ ನಕಲಿ ನೋಟು ಹಾವಳಿ ನಿಯಂತ್ರಣಕ್ಕೆ ಯಾವುದೇ ನೆರವಾಗದು ಎಂದು ಸಭೆಯಲ್ಲಿ ತಿಳಿಸಿರುವುದಾಗಿ ಆರ್‌ಟಿಐ ಕಾಯ್ದೆಯಡಿ ಪಡೆದಿರುವ ಉತ್ತರದಲ್ಲಿ ತಿಳಿದು ಬಂದಿದೆ ಎಂದು ಮಾಹಿತಿಹಕ್ಕು ಕಾರ್ಯಕರ್ತ ವೆಂಕಟೇಶ್ ನಾಯಕ್ ಅವರು ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್‌ನ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ. ನಗದು ಅಮಾನ್ಯತೆಗೆ ಅನುಮೋದನೆ ನೀಡಬೇಕೆಂಬ ಕೇಂದ್ರ ಸರಕಾರದ ಮನವಿಗೆ ಅನುಮೋದನೆ ನೀಡಿದ ಆರ್‌ಬಿಐ ಮಂಡಳಿಯ ಸಭೆಯಲ್ಲಿ ಆಗಿನ ಗವರ್ನರ್ ಊರ್ಜಿತ್ ಪಟೇಲ್ ಹಾಗೂ ಆಗಿನ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಉಪಸ್ಥಿತರಿದ್ದರು.

ಆಗಿನ ವಿತ್ತ ಸೇವೆಗಳ ಕಾರ್ಯದರ್ಶಿ ಅಂಜಲಿ ಚಿಬ್ ದುಗ್ಗಲ್, ಆರ್‌ಬಿ ಉಪಗವರ್ನರ್‌ಗಳಾದ ಆರ್.ಗಾಂಧಿ ಹಾಗೂ ಎಸ್.ಎಸ್.ಮುಂಧ್ರಾ ಉಪಸ್ಥಿತರಿದ್ದರು. ಗಾಂಧಿ ಹಾಗೂ ಮುಂಧ್ರಾ ಇಬ್ಬರೂ, ಮಂಡಳಿಯ ಸದಸ್ಯರಾಗಿ ಈಗ ಉಳಿದಿಲ್ಲ. 2018ರ ಡಿಸೆಂಬರ್‌ನಲ್ಲಿ ಶಕ್ತಿಕಾಂತ್ ದಾಸ್ ಅವರು ಆರ್‌ಬಿಐ ಗವರ್ನರ್ ಆಗಿ ನೇಮಕಗೊಂಡಿದ್ದರು.

ಕಪ್ಪುಹಣವನ್ನು ಮಟ್ಟಹಾಕಲು, ಖೋಟಾನೋಟು ಹಾವಳಿ ತಡೆಗೆ ಹಾಗೂ ಭಯೋತ್ಪಾದಕರಿಗೆ ಆರ್ಥಿಕ ನೆರವು ಹರಿದುಬರುವುದನ್ನು ತಪ್ಪಿಸುವ ಉದ್ದೇಶದಿಂದ 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ರದ್ದುಪಡಿಸುವುದಾಗಿ ಪ್ರಧಾನಿ 2016ರ ನವೆಂಬರ್ 8ರಂದು ಘೋಷಿಸಿದ್ದರು. ಖೋಟಾನೋಟುಗಳು ಪತ್ತೆಯಾದ ಯಾವುದೇ ಘಟನೆಯು ಕಳವಳಕಾರಿ ಹೌದಾದರೂ, ಒಟ್ಟು 400 ಕೋಟಿ ರೂ. ಮೌಲ್ಯದ ಖೋಟಾನೋಟುಗಳ ಚಲಾವಣೆಯಲ್ಲಿದ್ದುದು ಪತ್ತೆಯಾಗಿದೆ. ದೇಶದಲ್ಲಿ ಚಲಾವಣೆಯಲ್ಲಿರುವ

ಖೋಟಾನೋಟುಗಳ ಪ್ರಮಾಣಕ್ಕೆ ಹೋಲಿಸಿದರೆ ಇದು ಗಣನೀಯವೇನೂ ಅಲ್ಲವೆಂದು ಆರ್‌ ಬಿಐ ಮಂಡಳಿಯ ಸಭೆ ಅಭಿಪ್ರಾಯಿಸಿತ್ತು.

ನೋಟು ನಿಷೇಧದಿಂದ ದೇಶದ ಜಿಡಿಪಿಯ ಮೇಲೆ ಯಾವುದೇ ಪರಿಣಾಮವುಂಟಾಗಲಾರದೆಂದು ಕೇಂದ್ರ ಸರಕಾರವು ಸದಾ ಪ್ರತಿಪಾದಿಸುತ್ತಲೇ ಬಂದಿದೆ.

ಅನಾಮಿಕ ಮೂಲಗಳಿಂದ ಪೆಟ್ರೋಲ್ ಬಂಕ್‌ಗಳಿಗೆ ಈ ನಿಷೇಧಿತ ನೋಟುಗಳು ಪಾವತಿಯಾಗಿದ್ದು, ಅವು ಗಣನೀಯ ಪ್ರಮಾಣದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಾಸಾಗಿದೆ ಎಂದು ಆರ್‌ಟಿಐ ಉತ್ತರದಲ್ಲಿ ತಿಳಿಸಲಾಗಿದೆ.

 2016ರ ನವೆಂಬರ್ 8ರಂದು 500 ರೂ. ಹಾಗೂ 1 ಸಾವಿರ ರೂ. ಮೌಲ್ಯದ 15.41 ಕೋಟಿ ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿದ್ದವು. ನಗದು ಅಮಾನ್ಯತೆಯ ಬಳಿಕ ನಿಷೇಧಿತ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಜಮೆ ಮಾಡಲು ಭಾರತದ ನಿವಾಸಿಗಳಿಗೆ ನೀಡಲಾದ 50 ದಿನಗಳ ಗಡುವಿನಲ್ಲಿ ಹಾಗೂ ಅನಿವಾಸಿಗಳಿಗೆ ನೀಡಲಾದ 2017ರ ಜೂನ್ ಒಳಗಿನ ಅವಧಿಯಲ್ಲಿ 15.31 ಲಕ್ಷ ಕೋಟಿ ರೂ. ನೋಟುಗಳು ವಾಪಸ್ ಬಂದಿದ್ದವು.

‘‘ ಹೆಚ್ಚಿನ ಪ್ರಮಾಣದ ಕಪ್ಪುಹಣವನ್ನು ನಗದು ರೂಪದಲ್ಲಿ ಇರಿಸಲಾಗಿಲ್ಲ. ಅವನ್ನು ಚಿನ್ನ ಅಥವಾ ರಿಯಲ್ ಎಸ್ಟೇಟ್ ರೂಪದಲ್ಲಿ ಇಟ್ಟುಕೊಳ್ಳಲಾಗಿದೆ. ನೋಟು ನಿಷೇಧದ ಕ್ರಮದಿಂದಾಗಿ ಈ ಆಸ್ತಿಗಳ ಮೇಲೆ ಯಾವುದೇ ರೀತಿಯ ಭೌತಿಕ ಪರಿಣಾಮ ಉಂಟಾಗಲಾರದು’’ ಎಂದು ಆರ್‌ ಬಿಐ ಮಂಡಳಿಯು ಹೊಸದಿಲ್ಲಿ ನಡೆದ ತನ್ನ 561ನೇ ಸಭೆಯಲ್ಲಿ ಅಭಿಪ್ರಾಯಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News