ಪುಲ್ವಾಮ ಭಯೋತ್ಪಾದಕ ದಾಳಿಯ ರೂವಾರಿ ಎನ್‌ಕೌಂಟರ್‌ ನಲ್ಲಿ ಹತ್ಯೆ

Update: 2019-03-11 15:37 GMT

ಶ್ರೀನಗರ, ಮಾ. 11: ಫೆಬ್ರವರಿ 14ರ ಪುಲ್ವಾಮ ಭಯೋತ್ಪಾದಕ ದಾಳಿಯ ಪ್ರಧಾನ ರೂವಾರಿ ಸಹಿತ ಜೈಶೆ ಮುಹಮ್ಮದ್‌ನ ಇಬ್ಬರು ಉಗ್ರರನ್ನು ಭದ್ರತಾ ಪಡೆ ಸೋಮವಾರ ದಕ್ಷಿಣ ಕಾಶ್ಮೀರದ ಟ್ರಾಲ್ ಪ್ರದೇಶದಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದೆ.

ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಟ್ರಾಲ್ ಪ್ರದೇಶದ ಪಿಂಗ್ಲಿಶ್‌ನಲ್ಲಿ ನಿನ್ನೆ ಮಧ್ಯರಾತ್ರಿ ಪೂರ್ಣಗೊಂಡ ಎನ್‌ಕೌಂಟರ್‌ನಲ್ಲಿ ಜೈಶೆ ಮುಹಮ್ಮದ್‌ನ ಮುದಸ್ಸಿರ್ ಅಹ್ಮದ್ ಖಾನ್ ಅಲಿಯಾಸ್ ಮುಹಮ್ಮದ್ ಭಾ ಹಾಗೂ ಖಾಲಿದ್ ಹತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಭಯೋತ್ಪಾದಕರು ಅಡಗಿರುವ ಖಚಿತ ಮಾಹಿತಿ ಸ್ವೀಕರಿಸಿದ ಬಳಿಕ ಭದ್ರತಾ ಪಡೆ ಪಿಂಗ್ಲಿಶ್ ಅನ್ನು ಸುತ್ತುವರಿಯಿತು ಹಾಗೂ ಶೋಧ ಕಾರ್ಯಾಚರಣೆ ಆರಂಭಿಸಿತು. ಈ ಸಂದರ್ಭ ಉಗ್ರರು ಯೋಧರ ಮೇಲೆ ಉಗ್ರರು ಗುಂಡು ಹಾರಿಸಿದರು. ಯೋಧರು ಪ್ರತಿದಾಳಿ ನಡೆಸಿದರು. ಇದರಿಂದ ಶೋಧ ಕಾರ್ಯಾಚರಣೆ ಎನ್‌ಕೌಂಟರ್‌ಗೆ ತಿರುಗಿತು ಎಂದು ಅವರು ತಿಳಿಸಿದ್ದಾರೆ.

ಇದುವರೆಗೆ ಸಂಗ್ರಹಿಸಿರುವ ಪುರಾವೆಗಳನ್ನು ಪರಿಶೀಲಿಸಿರುವ ಭಧ್ರತಾ ಅಧಿಕಾರಿಗಳು, ಪುಲ್ವಾಮ ಆತ್ಮಾಹುತಿ ದಾಳಿಗೆ ಬಳಸಿರುವ ಸ್ಫೋಟಕ ಹಾಗೂ ವಾಹನವನ್ನು 23 ವರ್ಷದ ಖಾನ್ ವ್ಯವಸ್ಥೆಗೊಳಿಸಿದ್ದ. ಪುಲ್ವಾಮದ ನಿವಾಸಿಯಾಗಿರುವ ಈತ ಪದವೀಧರ ಎಂದು ತಿಳಿಸಿದ್ದಾರೆ. ಟ್ರಾಲ್‌ನ ಮಿರ್ ಮೊಹಲ್ಲಾದ ನಿವಾಸಿಯಾಗಿರುವ ಖಾನ್ 2017ರಲ್ಲಿ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯಲ್ಲಿ ಕೆಲವು ಕಾಲ ಕಾರ್ಯ ನಿರ್ವಹಿಸಿದ್ದ. ಅನಂತರ ಆತನನ್ನು ನೂರ್ ಮುಹಮ್ಮದ್ ತಾಂತ್ರೆ ಅಲಿಯಾಸ್ ನೂರ್ ಟ್ರಾಲಿ ಜೈಶೆ ಮುಹಮ್ಮದ್ ಸಂಘಟನೆಗೆ ಮತ್ತೆ ಎಳೆದು ತಂದಿದ್ದ. ತಾಂತ್ರೆ ಡಿಸೆಂಬರ್ 2017ರಲ್ಲಿ ಹತ್ಯೆಯಾದ ಬಳಿಕ ಖಾನ್ 2018 ಜನವರಿ 14ರಂದು ತನ್ನ ಮನೆಯಿಂದ ನಾಪತ್ತೆಯಾಗಿದ್ದ ಹಾಗೂ ಜೈಶೆ ಮುಹಮ್ಮದ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News