ಶಬರಿಮಲೆ ವಿಷಯ ಕೂಡ ನೀತಿ ಸಂಹಿತೆ ವ್ಯಾಪ್ತಿಗೆ !

Update: 2019-03-11 15:41 GMT

 ತಿರುವನಂತಪುರ, ಮಾ. 11: ಚುನಾವಣಾ ಪ್ರಚಾರದ ಸಂದರ್ಭ ಶಬರಿಮಲೆ ವಿಷಯ ಪ್ರಸ್ತಾಪಿಸದಂತೆ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದೆ. ‘‘ಚುನಾವಣಾ ಪ್ರಚಾರದ ಸಂದರ್ಭ ಶಬರಿಮಲೆ ವಿಷಯ ಬಳಸಿಕೊಳ್ಳುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ. ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಮಂಗಳವಾರ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿ ನಿರ್ದಿಷ್ಟ ನಿರ್ದೇಶನಗಳನ್ನು ನೀಡಲಾಗುವುದು’’ ಎಂದು ಕೇರಳದ ಮುಖ್ಯ ಚುನಾವಣಾ ಆಯುಕ್ತ ಟೀಕಾ ರಾಮ್ ಮೀನಾ ತಿಳಿಸಿದ್ದಾರೆ.

ಧರ್ಮ ಅಥವಾ ಜಾತಿ ಆಧಾರದಲ್ಲಿ ಚುನಾವಣಾ ಪ್ರಚಾರ ನಡೆಸುವುದು ಕೂಡ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ. ಸುಪ್ರೀಂ ಕೋರ್ಟ್ ತೀರ್ಪಿನ ಟೀಕೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ವರ್ಷ ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಪರಿಷ್ಕೃತ ಫಾರಂ 26ರಲ್ಲಿ ಅಫಿದಾವಿತ್ ಸಲ್ಲಿಸಬೇಕು. ಸುಪ್ರೀಂ ಕೋರ್ಟ್‌ನ ನಿರ್ದೇಶನದ ಹಿನ್ನೆಲೆಯಲ್ಲಿ ಈ ಪರಿಷ್ಕರಣೆ. ಅಭ್ಯರ್ಥಿಗಳು ತಮ್ಮ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಮುದ್ರಣ ಹಾಗೂ ಇಲೆಕ್ಟ್ರಾನಿಕ್ಸ್ ಮಾದ್ಯಮಗಳಲ್ಲಿ ಪ್ರಕಟನೆ ನೀಡಬೇಕು. ಪಕ್ಷಗಳು ತಮ್ಮ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಬಗ್ಗೆ ರಾಜ್ಯಾದ್ಯಂತ ಜಾಹೀರಾತು ಬಿಡುಗಡೆ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಚುನಾವಣಾ ಪ್ರಚಾರದ ಸಂದರ್ಭ ಚುನಾವಣಾ ಆಯೋಗ ಹಸಿರು ಶಿಷ್ಟಾಚಾರ ಅನುಸರಿಸಲಿದೆ. ಫ್ಲೆಕ್ಸ್ ವಸ್ತುಗಳಿಗೆ ನಿಷೇಧ ಹೇರುವ ಯೋಜನೆ ಇದೆ. ಇದನ್ನು ಕೂಡ ರಾಜಕೀಯ ಪಕ್ಷಗಳೊಂದಿಗಿನ ಸಭೆಯಲ್ಲಿ ಚರ್ಚಿಸಲಾಗುವುದು. ಧ್ವನಿ ವರ್ಧಕ ಬಳಕೆಗೆ ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಮೊದಲ ಬಾರಿಗೆ ಚುನಾವಣಾ ಆಯೋಗ ಭಿನ್ನ ಸಾಮರ್ಥ್ಯರು ಮತ ಚಲಾಯಿಸಲು ಸುಲಭವಾಗುವಂತೆ ಸಂಚಾರ ಸೌಲಭ್ಯ ಒದಗಿಸಲಿದೆ. ಭಿನ್ನ ಸಾಮರ್ಥ್ಯರ ಸ್ನೇಹಿ ರ್ಯಾಂಪ್ಸ್ ಸೇರಿದಂತೆ ಇತರ ಸೌಲಭ್ಯಗಳನ್ನು ಮತಗಟ್ಟೆಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News