ವಾಯುದಾಳಿಯ ಏಕೈಕ ಉದ್ದೇಶ ಚುನಾವಣೆಯ ಗೆಲುವು: ಫಾರೂಕ್ ಅಬ್ದುಲ್ಲಾ

Update: 2019-03-11 16:35 GMT

ಶ್ರೀನಗರ, ಮಾ.11: ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಏಕೈಕ ಉದ್ದೇಶ ಇರಿಸಿಕೊಂಡು ಕೇಂದ್ರ ಸರಕಾರ ಬಾಲಕೋಟ್ ವಾಯುದಾಳಿಗೆ ಆದೇಶ ನೀಡಿತ್ತು ಎಂದು ಎನ್‌ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಆರೋಪಿಸಿದ್ದಾರೆ.

ಎಲ್ಲಾ ರಂಗದಲ್ಲೂ ವಿಫಲವಾಗಿರುವ ಬಿಜೆಪಿ, ಚುನಾವಣೆಗೂ ಮುನ್ನ ಪಾಕಿಸ್ತಾನದೊಂದಿಗೆ ಕದನ ನಡೆಸಲಿದೆ ಎಂಬುದನ್ನು ಮೊದಲೇ ಊಹಿಸಲಾಗಿತ್ತು. ಈ ಮೂಲಕ ಮೋದಿ ದೇಶವನ್ನು ರಕ್ಷಿಸಲು ಬಂದಿರುವ ಅವತಾರ ಪುರುಷ ಮತ್ತು ಅವರಿಲ್ಲದೆ ದೇಶ ಉಳಿಯದು ಎಂದು ಬಿಂಬಿಸುವ ಹುನ್ನಾರವಿದೆ. ಆದರೆ ಒಂದು ಮಾತನ್ನು ಮೋದಿಗೆ ನೆನಪಿಸ ಬಯಸುತ್ತೇನೆ. ಮೋದಿ ಅಥವಾ ನಾನು ಬದುಕುಳಿಯುತ್ತೇನೋ ಇಲ್ಲವೋ ಅದು ಬೇರೆ ವಿಷಯ, ಆದರೆ ಭಾರತ ಉಳಿಯಲಿದೆ ಮತ್ತು ಮುನ್ನಡೆಯಲಿದೆ ಎಂದು ಅಬ್ದುಲ್ಲಾ ಹೇಳಿದರು.

ಚುನಾವಣೆಯ ಏಕೈಕ ದೃಷ್ಟಿಯಿಂದ ನಡೆಸಲಾದ ಸರ್ಜಿಕಲ್ ದಾಳಿಯಿಂದ ದೇಶದ ಕೋಟ್ಯಾಂತರ ರೂಪಾಯಿ ವೌಲ್ಯದ ವಿಮಾನ ನಷ್ಟವಾಗಿದೆ. ಯುದ್ಧದ ಭಯ ಹರಡಿ ದೇಶದೆಲ್ಲೆಡೆ ಭೀತಿಯ ವಾತಾವರಣ ಮೂಡಿಸಲು ಅವರು ಬಯಸುತ್ತಿದ್ದಾರೆ. ಮೋದಿ ಇಲ್ಲದಿದ್ದರೆ ದೇಶ ಅಪಾಯಕ್ಕೆ ಸಿಲುಕಲಿದೆ ಎಂಬ ಭಾವನೆ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಮೋದಿ ದೇವರಲ್ಲ ಎಂದು ಅವರಿಗೆ ನೆನಪಿಸಬಯಸುತ್ತೇನೆ ಎಂದು ಫಾರೂಕ್ ಹೇಳಿದರು.

ಮೋದಿ ಸರಕಾರ ಕಾಶ್ಮೀರದ ವಿಷಯವನ್ನು ಈಗ ಅಂತರಾಷ್ಟ್ರೀಯ ಮಟ್ಟದ ಸುದ್ದಿಯನ್ನಾಗಿಸಿದೆ. ಇದೀಗ ಭಾರತ-ಪಾಕಿಸ್ತಾನ ದೇಶಗಳು ಕಾಶ್ಮೀರದ ವಿಷಯದಲ್ಲಿ ಚರ್ಚೆ ನಡೆಸಬೇಕೆಂಬ ಒತ್ತಾಯಕ್ಕೆ ಹಲವು ದೇಶಗಳು ಧ್ವನಿಗೂಡಿಸುವಂತಾಗಿದೆ. ಒಂದಂತೂ ಸತ್ಯ, ಉಭಯ ರಾಷ್ಟ್ರಗಳ ನಡುವಿನ ಮಾತುಕತೆಯೇ ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಇರುವ ಏಕೈಕ ಮಾರ್ಗವಾಗಿದೆ ಎಂದರು. ಕಾಶ್ಮೀರ ವಿಧಾನಸಭೆಗೆ ಈಗ ಚುನಾವಣೆ ನಡೆಸದಿರುವ ಆಯೋಗದ ನಿರ್ಧಾರವನ್ನು ಉಲ್ಲೇಖಿಸಿದ ಅವರು, ಇದರ ಹಿಂದೆ ಕೇಂದ್ರ ಸರಕಾರದ ಕೈವಾಡವಿದೆ. ಅವರು(ಕೇಂದ್ರ ಸರಕಾರ) ಕಾಶ್ಮೀರದಲ್ಲಿ ಯಾವುದೋ ಕೇಡಿನ ಕೃತ್ಯದ ಹುನ್ನಾರ ನಡೆಸಿರಬಹುದು. ಆದರೆ ವಿಪಕ್ಷಗಳು ಒಗ್ಗೂಡಿದರೆ ಅವರ ಸಂಚು ವಿಫಲವಾಗುತ್ತದೆ. ತಾನು ಬಲಿಷ್ಟ ಎಂದು ಹೇಳಿಕೊಳ್ಳುತ್ತಿರುವ ಕೇಂದ್ರ ಸರಕಾರ ರಾಜ್ಯದಲ್ಲಿ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿರುವುದೇಕೆ. ಇದು ಶರಣಾಗತಿಯಲ್ಲದೆ ಮತ್ತೇನು ಎಂದವರು ಪ್ರಶ್ನಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News