×
Ad

ಪಂತ್ ಕಳಪೆ ವಿಕೆಟ್‌ಕೀಪಿಂಗ್: ಧೋನಿ ಕರೆ ತನ್ನಿ ಎಂದ ಕ್ರಿಕೆಟ್ ಅಭಿಮಾನಿ

Update: 2019-03-11 23:40 IST

ಮೊಹಾಲಿ, ಮಾ.11: ಆಸ್ಟ್ರೇಲಿಯ ವಿರುದ್ಧ ರವಿವಾರ ಇಲ್ಲಿನ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್‌ನ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಭಾರತ ನಾಲ್ಕನೇ ಪಂದ್ಯ ಆಡುತ್ತಿದ್ದಾಗ ನೆರೆದಿದ್ದ ಪ್ರೇಕ್ಷಕರು ಧೋನಿ ಪರ ಘೋಷಣೆ ಮೊಳಗಿಸಿದರು. ಯುವ ವಿಕೆಟ್‌ಕೀಪರ್ ರಿಷಭ್ ಪಂತ್ ನಿರ್ಣಾಯಕ ಸಂದರ್ಭದಲ್ಲಿ ವಿಕೆಟ್‌ಕೀಪಿಂಗ್‌ನಲ್ಲಿ ಕೆಲವು ತಪ್ಪೆಸಗಿದಾಗ ಧೋನಿಗಾಗಿ ಅಭಿಮಾನಿಗಳ ಆಗ್ರಹವು ಮುಗಿಲು ಮುಟ್ಟಿತು.

ಭಾರತ ನಾಯಕ ವಿರಾಟ್ ಕೊಹ್ಲಿ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ನಿರತರಾಗಿದ್ದಾಗ ಕ್ರಿಕೆಟ್ ಅಭಿಮಾನಿಯೊಬ್ಬ, ‘‘ವಿರಾಟ್ ಭಾಯ್, ಧೋನಿ ಕೋ ಬುಲಾವ್(ಧೋನಿಯನ್ನು ಮತ್ತೆ ಕರೆ ತನ್ನಿ)ಎಂಬ ಬೇಡಿಕೆ ಇಡುತ್ತಿದ್ದ ವೀಡಿಯೊ ವೈರಲ್ ಆಗಿದೆ. ಭಾರತ 4ನೇ ಏಕದಿನ ಪಂದ್ಯದಲ್ಲಿ ಬೃಹತ್ ಮೊತ್ತ ಗಳಿಸಿದ ಹೊರತಾಗಿಯೂ 4 ವಿಕೆಟ್‌ಗಳಿಂದ ಸೋಲುಂಡಿತ್ತು. ಪ್ರವಾಸಿ ಆಸೀಸ್ ತಂಡ 5 ಪಂದ್ಯಗಳ ಸರಣಿಯನ್ನು 2-2 ರಿಂದ ಸಮಬಲಗೊಳಿಸಿತ್ತು.

ದಿಲ್ಲಿಯ ಆಟಗಾರ ರಿಷಭ್ ಪಂತ್ ಇನಿಂಗ್ಸ್‌ನ 44ನೇ ಓವರ್‌ನಲ್ಲಿ ಆಸ್ಟ್ರೇಲಿಯದ ಮ್ಯಾಚ್ ವಿನ್ನರ್ ಆ್ಯಶ್ಟನ್ ಟರ್ನರ್ 38 ರನ್ ಗಳಿಸಿ ಆಡುತ್ತಿದ್ದಾಗ ಕೀಪಿಂಗ್‌ನಲ್ಲಿ ದೊಡ್ಡ ಪ್ರಮಾದ ಎಸಗಿದ್ದರು. ಯಜುವೇಂದ್ರ ಚಹಾಲ್ ಅವರು ಚೆಂಡನ್ನು ಲೆಗ್‌ಸೈಡ್‌ನಲ್ಲಿ ಎಸೆದಿದ್ದರು. ಆಗ ಟರ್ನರ್ ಮುನ್ನುಗ್ಗಿ ಆಡಲು ಮುಂದಾದರು. ಆಗ ಚೆಂಡನ್ನು ಪಡೆಯಲು ವಿಫಲವಾದ ಪಂತ್ ಸ್ಟಂಪಿಂಗ್ ಅವಕಾಶವನ್ನು ಕೈಚೆಲ್ಲಿದ್ದರು. ಆಗ ಮೊಹಾಲಿ ಪ್ರೇಕ್ಷಕರು ಪಂತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ, ಧೋನಿ ಹೆಸರನ್ನು ಕೂಗತೊಡಗಿದರು. 4ನೇ ಏಕದಿನ ಪಂದ್ಯದ ಬ್ಯಾಟಿಂಗ್ ಹೀರೋ ಶಿಖರ್ ಧವನ್, ಪಂತ್ ಸಮರ್ಥನೆಗೆ ಮುಂದಾಗಿದ್ದು, ‘‘ರಿಷಭ್ ಯುವ ಆಟಗಾರ. ಇತರ ಯುವ ಆಟಗಾರರಂತೆ ಆತನಿಗೂ ಸ್ವಲ್ಪ ಸಮಯಾವಕಾಶ ನೀಡಬೇಕು. ರಿಷಭ್ ಈಗಷ್ಟೇ ಕಾಲೂರುತ್ತಿದ್ದಾರೆ. ಅವರನ್ನು ಧೋನಿಗೆ ಹೋಲಿಸಲು ಸಾಧ್ಯವಿಲ್ಲ. ಇನ್ನಷ್ಟು ವರ್ಷ ಆಡಿದರೆ ಅನುಭವ ಪಡೆಯುತ್ತಾರೆ’’ ಎಂದರು.

ಭಾರತ-ಆಸೀಸ್ ಮಧ್ಯೆ ಸರಣಿ ನಿರ್ಣಾಯಕ 5ನೇ ಪಂದ್ಯ ಬುಧವಾರ ಹೊಸದಿಲ್ಲಿಯ ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News