ನಡಾಲ್, ಫೆಡರರ್ 3ನೇ ಸುತ್ತಿಗೆ
ಇಂಡಿಯನ್ ವೆಲ್ಸ್, ಮಾ.11: ವಿಶ್ವದ ನಂ.2ನೇ ಆಟಗಾರ ರಫೆಲ್ ನಡಾಲ್ ಹಾಗೂ ರೋಜರ್ ಫೆಡರರ್ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಮೂರು ಬಾರಿ ಇಂಡಿಯನ್ ವೆಲ್ಸ್ ಪ್ರಶಸ್ತಿ ಜಯಿಸಿರುವ ನಡಾಲ್ ಕೇವಲ 72 ನಿಮಿಷಗಳಲ್ಲಿ ಜಾರೆಡ್ ಡೊನಾಲ್ ್ಡಸನ್‌ರನ್ನು 6-1, 6-1 ನೇರ ಸೆಟ್‌ಗಳಿಂದ ಮಣಿಸಿದರು.
ಆರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಫೆಡರರ್ ಜರ್ಮನಿಯ ಪೀಟರ್ ಗೊಜೊವಿಕ್‌ರನ್ನು 6-1, 7-5 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.
ಸ್ವಿಸ್ ಸೂಪರ್‌ಸ್ಟಾರ್ ಫೆಡರರ್ ಮುಂದಿನ ಸುತ್ತಿನಲ್ಲಿ ತಮ್ಮದೇ ದೇಶದ ಸ್ಟಾನ್ ವಾವ್ರಿಂಕರನ್ನು ಎದುರಿಸಲಿದ್ದಾರೆ. ಮೂರು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ವಾವ್ರಿಂಕ ಪ್ರಸ್ತುತ ಶ್ರೇಯಾಂಕರಹಿತರಾಗಿ ಸ್ಪರ್ಧೆಯಲ್ಲಿದ್ದಾರೆ. ವಾವ್ರಿಂಕ ಮೂರು ಗಂಟೆ, 24 ನಿಮಿಷಗಳ ಕಾಲ ನಡೆದ ಮ್ಯಾರಥಾನ್ ಪಂದ್ಯದಲ್ಲಿ 29ನೇ ಶ್ರೇಯಾಂಕದ ಹಂಗೇರಿಯದ ಮಾರ್ಟನ್ ಫುಸೊವಿಕ್ಸ್ ರನ್ನು 6-4, 6-7(5/7), 7-5 ಅಂತರದಿಂದ ಮಣಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್‌ಗೆ ಸೋತಿರುವ ನಡಾಲ್ ಈ ವರ್ಷ ಮೂರನೇ ಟೂರ್ನಮೆಂಟ್‌ನಲ್ಲಿ ಆಡುತ್ತಿದ್ದು ಮುಂದಿನ ಸುತ್ತಿನಲ್ಲಿ ಡಿಯಾಗೊ ಸ್ಚೆವರ್ಟ್ ಮನ್‌ರನ್ನು ಎದುರಿಸಲಿದ್ದಾರೆ. ಡಿಯಾಗೊ ಮತ್ತೊಂದು ಪಂದ್ಯದಲ್ಲಿ ಸ್ಪೇನ್‌ನ ರಾಬರ್ಟೊ ಕಾರ್ಬಾಲ್ಸ್ ರನ್ನು 6-3,6-1 ರಿಂದ ಮಣಿಸಿದ್ದಾರೆ. ನಡಾಲ್ ಅರ್ಜೆಂಟೀನದ ಡಿಯಾಗೊ ವಿರುದ್ಧ ಆಡಿರುವ ಆರೂ ಪಂದ್ಯಗಳನ್ನು ಜಯಿಸಿದ್ದಾರೆ. ಜಪಾನ್‌ನ ಆರನೇ ಶ್ರೇಯಾಂಕದ ಆಟಗಾರ ಕಿ ನಿಶಿಕೊರಿ ಫ್ರಾನ್ಸ್ ನ ಅಡ್ರಿಯಾನ್ ಮನ್ನಾರಿನೊರನ್ನು 6-4, 4-6, 7-6(7/4) ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ. ನಿಶಿಕೊರಿ ಮುಂದಿನ ಸುತ್ತಿನಲ್ಲಿ 67ನೇ ರ್ಯಾಂಕಿನ ಪೊಲೆಂಡ್‌ನ ಹ್ಯುಬರ್ಟ್ ಹುರ್ಕಾಝ್‌ರನ್ನು ಎದುರಿಸಲಿದ್ದಾರೆ. ಹುರ್ಕಾಝ್ ಫ್ರಾನ್ಸ್‌ನ ಲುಕಾಸ್ ಪೌಲ್ಲಿಯವರನ್ನು 6-2, 3-6, 6-4 ಸೆಟ್‌ಗಳಿಂದ ಮಣಿಸಿದರು.
► ಟೂರ್ನಿಯಿಂದ ಸೆರೆನಾ ಹೊರಕ್ಕೆ
ಅಮೆರಿಕದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಅನಾರೋಗ್ಯದ ಕಾರಣ ಇಂಡಿಯನ್ ವೆಲ್ಸ್ ಟೂರ್ನಿಯಿಂದ ಹೊರನಡೆದಿದ್ದಾರೆ. ಈ ಪಂದ್ಯಾವಳಿಯಲ್ಲಿ ರವಿವಾರ ಸ್ಪೇನ್‌ನ ಗಾರ್ಬೈನ್ ಮುಗುರುಝಾ ವಿರುದ್ಧದ ಪಂದ್ಯದಲ್ಲಿ ಹಿನ್ನಡೆಯಲ್ಲಿದ್ದ ವೇಳೆ ಸೆರೆನಾ ಟೂರ್ನಿಯಿಂದ ಹಿಂದೆ ಸರಿದರು. ಟೂರ್ನಿಯಿಂದ ಹೊರನಡೆಯುವ ನಿರ್ಧಾರ ತೆಗೆದುಕೊಂಡಾಗ ಸೆರೆನಾ 3-6, 0-1 ಸೆಟ್‌ಗಳ ಹಿನ್ನಡೆಯಲ್ಲಿದ್ದರು. ಆರಂಭದ ಸೆಟ್‌ನಲ್ಲಿ 3-0 ಮುನ್ನಡೆಯಲ್ಲಿದ್ದ ಸೆರೆನಾ ಆ ಬಳಿಕ ಸತತ 7 ಗೇಮ್‌ಗಳನ್ನು ಕಳೆದುಕೊಂಡರು. 2ನೇ ಸೆಟ್‌ನ ಪ್ರಥಮ ಗೇಮ್ ಮುಗಿದ ಬಳಿಕ ತಮ್ಮ ಕುರ್ಚಿಗೆ ಮರಳಿದ ಸೆರೆನಾ ವೇಗವಾಗಿ ಉಸಿರಾಡತೊಡಗಿದರು. ತಮ್ಮ ಸೂಪರ್‌ವೈಸರ್ ಡೊನ್ನಾ ಕೆಲ್ಸೊ ಅವರೊಂದಿಗೆ ಚರ್ಚಿಸಿದ ಬಳಿಕ ಅವರು ಆಟದಿಂದ ನಿವೃತ್ತಿಯಾದರು.