ಟೀಮ್ ಇಂಡಿಯಾಕ್ಕೆ ಮಿಲಿಟರಿ ಕ್ಯಾಪ್ ಧರಿಸಲು ಅನುಮತಿ ನೀಡಲಾಗಿತ್ತು: ಐಸಿಸಿ
ಹೊಸದಿಲ್ಲಿ, ಮಾ.11: ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗೌರವಾರ್ಥ ಭಾರತೀಯ ಕ್ರಿಕೆಟ್ ತಂಡಕ್ಕೆ ಮಿಲಿಟರಿ ಕ್ಯಾಪ್ ಧರಿಸಲು ಅನುಮತಿ ನೀಡಲಾಗಿತ್ತು ಎಂದು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಸೋಮವಾರ ಸ್ಪಷ್ಟಪಡಿಸಿದೆ.
ರಾಂಚಿಯಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧ ಪಂದ್ಯದಲ್ಲಿ ಭಾರತದ ಆಟಗಾರರು ಮಿಲಿಟರಿ ಕ್ಯಾಪ್ ಧರಿಸಿ ಆಡಿದ್ದಕ್ಕೆ ಪಾಕಿಸ್ತಾನ ಐಸಿಸಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿತ್ತು. ಭಾರತ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿತ್ತು.
“ಪುಲ್ವಾಮ ಉಗ್ರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರ ಸ್ಮರಣೆಯ ಜೊತೆಗೆ, ನಿಧಿ ಸಂಗ್ರಹಿಸುವ ಉದ್ದೇಶದೊಂದಿಗೆ ಮಿಲಿಟರಿ ಕ್ಯಾಪ್ ಧರಿಸಲು ಬಿಸಿಸಿಐ, ಐಸಿಸಿಯಿಂದ ಅನುಮತಿ ಪಡೆದಿತ್ತು” ಎಂದು ಐಸಿಸಿ ಪ್ರಧಾನ ಪ್ರಬಂಧಕ ಕ್ಲೈರ್ ಫುರ್ಲಾಂಗ್ ಹೇಳಿದ್ದಾರೆ.
ಬಿಸಿಸಿಐ ಯಾವುದೇ ಒಂದು ಉದ್ದೇಶಕ್ಕೆ ಐಸಿಸಿಯಿಂದ ಅನುಮತಿ ಪಡೆದಿದ್ದು, ಆ ಅನುಮತಿಯನ್ನು ಬೇರೆಯದ್ದಕ್ಕೆ ಬಳಸಿಕೊಂಡಿದೆ. ಇದು ಸ್ವೀಕಾರಾರ್ಹವಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವಾದವಾಗಿದೆ.