ಟೇಲರ್ ದ್ವಿಶತಕ: ಕಿವೀಸ್ ಗೆಲುವಿನಾಸೆ ಜೀವಂತ
ವೆಲ್ಲಿಂಗ್ಟನ್, ಮಾ.11: ರಾಸ್ ಟೇಲರ್ ದ್ವಿಶತಕ ಹಾಗೂ ಬಾಂಗ್ಲಾದೇಶದ ಮೂರು ವಿಕೆಟ್‌ಗಳ ಶೀಘ್ರ ಪತನವು ಮಳೆಬಾಧಿತ ಎರಡನೇ ಟೆಸ್ಟ್‌ನಲ್ಲಿ ನ್ಯೂಝಿಲೆಂಡ್‌ನ ಗೆಲುವಿನ ಆಸೆಯನ್ನು ಸೋಮವಾರ ಜೀವಂತವಾಗಿರಿಸಿದೆ.
ಇಲ್ಲಿನ ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್‌ನ ಎರಡು ದಿನದಾಟ ಮಳೆಗೆ ಆಹುತಿಯಾದ ಬಳಿಕ ಸೋಮವಾರ ನಾಲ್ಕನೇ ದಿನದಾಟ ಅಂತ್ಯವಾದಾಗ ಬಾಂಗ್ಲಾದೇಶ ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ 3 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿತ್ತು. ಕಿವೀಸ್ ತಂಡವನ್ನು ಮರಳಿ ಬ್ಯಾಟಿಂಗ್ ಇಳಿಸಬೇಕೆಂದರೆ ಬಾಂಗ್ಲಾ ಇನ್ನೂ 141 ರನ್ ಗಳಿಸಬೇಕಿದೆ. ಪ್ರಥಮ ಇನಿಂಗ್ಸ್‌ನಲ್ಲಿ ಬಾಂಗ್ಲಾ 211 ರನ್‌ಗೆ ಸರ್ವಪತನವಾಗಿತ್ತು.
ನ್ಯೂಝಿಲೆಂಡ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 432 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಟೇಲರ್ 212 ಎಸೆತಗಳನ್ನು ಎದುರಿಸಿ ಬರೋಬ್ಬರಿ 200 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಹೆನ್ರಿ ನಿಕೊಲ್ಸ್ ಶತಕ (107) ಹಾಗೂ ನಾಯಕ ಕೇನ್ ವಿಲಿಯಮ್ಸನ್ ಅರ್ಧಶತಕದ (74) ಕೊಡುಗೆ ನೀಡಿದರು. ಎರಡನೇ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದ ತಮೀಮ್ ಇಕ್ಬಾಲ್ (4) ಮೊದಲ ಓವರ್‌ನಲ್ಲೇ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿದರು. ಮೋಮಿನುಲ್ ಹಕ್ (10) ಹಾಗೂ ಶಾದ್ಮನ್ ಇಸ್ಲಾಮ್ (29) ಅವರನ್ನು ಹಿಂಬಾಲಿಸಿದರು. ಮುಹಮ್ಮದ್ ಮಿಥುನ್ (25) ಹಾಗೂ ಸೌಮ್ಯ ಸರ್ಕಾರ್ (12) ಕ್ರೀಸ್ ಕಾಯ್ದುಕೊಂಡಿದ್ದಾರೆ.