ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದರೆ ಕ್ರಮ: ಮಂಗಳೂರು ಕಮಿಷನರ್ ಎಚ್ಚರಿಕೆ

Update: 2019-03-14 06:40 GMT

ಮಂಗಳೂರು, ಮಾ.14: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಮಂಗಳೂರು ಪೊಲೀಸ್ ಮೈದಾನದಲ್ಲಿ ಗುರುವಾರ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಸುಮಾರು 200 ಕ್ಕೂ ಹೆಚ್ಚು ರೌಡಿಶೀಟರ್‌ಗಳ ಪರೇಡ್‌ ನಡೆಸಲಾಯಿತು.

ಮಂಗಳೂರು ಕಮಿಷನರೇಟ್‌ನ 20ಕ್ಕೂ ಹೆಚ್ಚು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿನ 1,000 ಪ್ರತಿಬಂಧಕ ಕಾಯ್ದೆಗಳಲ್ಲಿ ಬಂಧಿತರಾದ 200ಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನು ಪರೇಡ್ ನಡೆಸಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಯಿತು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ರೌಡಿಶೀಟರ್‌ಗಳ ವಿರುದ್ಧ ಬೇರೆ ಬೇರೆ ಅಪರಾಧಗಳಲ್ಲಿ ಭಾಗಿಯಾಗಿರುವ ಪ್ರಕರಣಗಳಿವೆ. ಎಲ್ಲ ರೌಡಿಶೀಟರ್‌ಗಳ ಚಲನವಲನವನ್ನು ಪೊಲೀಸ್ ಇಲಾಖೆ ಗಮನಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಸಮಾಜಕ್ಕೆ ಧಕ್ಕೆ ತರುವಂತಹ ಕೆಲಸಗಳನ್ನು ಕೈಬಿಟ್ಟು ಸಾಮಾನ್ಯ ನಾಗರಿಕರಂತೆ ಬದುಕಬೇಕು. ವಿವಿಧ ವೃತ್ತಿಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗದೇ ಇದ್ದಲ್ಲಿ, ರೌಡಿಶೀಟರ್‌ಗಳ ಚಲನವಲನ ಸರಿಯಾದ ದಾರಿಯಲ್ಲಿದ್ದರೆ ಮುಚ್ಚಳಿಕೆ ಪತ್ರಗಳಿಂದ ಮುಕ್ತಗೊಳಿಸಲಾಗುವುದು. ಮುಚ್ಚಳಿಕೆ ಪತ್ರದ ವಿರುದ್ಧ ನಡೆದುಕೊಂಡರೆ ಅಂತಹವರ ವಿರುದ್ಧ ಗೂಂಡಾ ಕಾಯ್ದೆ ಸೇರಿದಂತೆ ವಿವಿಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದರಿಂದ ನಿಮ್ಮ ಕುಟುಂಬಕ್ಕೂ ತೊಂದರೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಚುನಾವಣೆ ಪ್ರಕ್ರಿಯೆಯಲ್ಲಿ ಯಾವುದೇ ಕಾರಣಕ್ಕೂ ತೊಂದರೆ ನೀಡುವಂತಹ ವ್ಯಕ್ತಿಗಳಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಚುನಾವಣೆಯಲ್ಲಿ ಅಶಾಂತಿ ಉಂಟು ಮಾಡಿದಲ್ಲಿ ಅದನ್ನು ಪೊಲೀಸ್ ಇಲಾಖೆ ಸಹಿಸುವುದಿಲ್ಲ ಎಂದು ಹೇಳಿದರು.

ಬೌನ್ಸರ್ ಅಪರಾಧ ಹಿನ್ನೆಲೆ ಪರಿಶೀಲನೆ: ಸಂದೀಪ್ ಪಾಟೀಲ್

ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಮಯ ಮೀರಿ ಪಬ್‌ಗಳನ್ನು ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಪಬ್‌ಗಳಲ್ಲಿ ಕುಡಿದು ಗಲಾಟೆ ಮಾಡಿಂತಹ ಘಟನೆಗಳ ಈ ಹಿಂದೆ ನಡೆದಿವೆ. ಇದನ್ನೆಲ್ಲ ಕಡಿವಾಣ ಹಾಕಲು ಪಬ್ ಮಾಲಕರಿಗೆ ಕಾನೂನು ಪ್ರಕಾರ ನಡೆದುಕೊಂಡು ಹೋಗುವಂತೆ ಸಭೆ ಕರೆದು ಎಚ್ಚರಿಕೆ ನೀಡಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್‌ ತಿಳಿಸಿದ್ದಾರೆ.

ಪಬ್‌ಗಳಲ್ಲಿ ಕೆಲವೆಡೆ ಬೌನ್ಸರ್ಸ್‌ಗಳನ್ನು ಇಡಲಾಗಿದೆ. ಅಂತಹವರೇ ಕಾನೂನನ್ನು ಕೈಗೆತ್ತಿಕೊಂಡು ಜನರ ಮೇಲೆ ಹಲ್ಲೆ ನಡೆಸಿದ ಘಟನೆಗಳು ಈ ಹಿಂದೆ ನಡೆದಿವೆ. ಬೌನ್ಸರ್‌ಗಳ ಕ್ರಿಮಿನಲ್ ಹಿನ್ನೆಲೆಯನ್ನು ಪರಿಶೀಲಿಸಲಾಗುವುದು. ಮಹಿಳೆ ಸುರಕ್ಷತೆ ಬಗ್ಗೆ ಜಾಗರೂಕರತೆ ವಹಿಸಬೇಕು. ಮುಖ್ಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಒಳಗೆ ಹಾಗೂ ಹೊರಭಾಗದಲ್ಲಿ ಅಳವಡಿಸಬೇಕು ಎಂದು ಪಬ್ ಮಾಲಕರಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಪರವಾನಿಗೆಯಂತೆ ರಾತ್ರಿ 11:30ಕ್ಕೆ ಪಬ್‌ಗಳನ್ನು ಬಂದ್ ಮಾಡಲು ನಿರ್ದೇಶನ ನೀಡಲಾಗಿದೆ. ಅಲ್ಲದೆ, ಪಬ್‌ಗಳಲ್ಲಿ ಮಾದಕ ದ್ರವ್ಯ, ಅನೈತಿಕ ಚಟುವಟಿಕೆಗಳು ನಡೆಯದಂತೆ ಪಬ್ ಮಾಲಕರು ಜವಾಬ್ದಾರಿ ವಹಿಸಿಕೊಳ್ಳಬೇಕು. ಒಂದು ವೇಳೆ ಪೊಲೀಸರ ದಾಳಿ ವೇಳೆ ಯಾವುದೇ ಮಾದಕ ದ್ರವ್ಯ ಸಿಕ್ಕಿದ್ದೇ ಆದಲ್ಲಿ ಪಬ್ ಮಾಲಕರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News