ಬಿ.ಸಿ.ರೋಡ್ ಸರ್ವಿಸ್ ರಸ್ತೆಯಲ್ಲಿ ಬಸ್ ಸಂಚಾರಕ್ಕೆ ನಿರ್ಬಂಧ: ಪ್ರಯಾಣಿಕರ ಪರದಾಟ

Update: 2019-03-14 06:52 GMT

ಬಂಟ್ವಾಳ, ಮಾ.14: ಬಿ.ಸಿ.ರೋಡ್‌ನ ಸರ್ವಿಸ್ ರಸ್ತೆಯಲ್ಲಿ ಖಾಸಗಿ, ಸರಕಾರಿ ಬಸ್‌ಗಳ ಸಂಚಾರವನ್ನು ನಿರ್ಬಂಧಿಸಿರುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಬಂಟ್ವಾಳ ಪೊಲೀಸರ ಈ ನಡೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯಾವುದೇ ಪೂರ್ವ ಸೂಚನೆ ನೀಡದೇ ಮಾ.12ರಂದು ಬೆಳಗ್ಗೆ ಹಠಾತ್ತಾಗಿ ಸರ್ವೀಸ್ ರಸ್ತೆಗೆ ಬಸ್‌ಗಳ ಪ್ರವೇಶವನ್ನು ತಡೆದ ಪೊಲೀಸರು ಮೇಲ್ಸೇತುವೆಯಲ್ಲೇ ಸಂಚರಿಸುವಂತೆ ಸೂಚಿಸಿದ್ದಾರೆ. ಪೊಲೀಸರ ಈ ದಿಢೀರ್ ನಿರ್ಧಾರದಿಂದ ಸಾರ್ವಜನಿಕರು ಗೊಂದಲಕ್ಕೊಳಗಾಗಿದ್ದರು. ಸರ್ವಿಸ್ ರಸ್ತೆಯಲ್ಲಿ ಬಸ್‌ಗೆ ಕಾಯುತ್ತಿದ್ದವರು ಅಲ್ಲೇ ಬಾಕಿ ಉಳಿಯುವಂತಾಗಿತ್ತು.

ಈ ನಡುವೆ ಪೊಲೀಸರ ಈ ನಿಲುವಿನಿಂದ ತಮ್ಮ ದುಡಿಮೆಗೂ ಸಮಸ್ಯೆಯಾಗುತ್ತಿದೆ ಎಂದು ಆಟೊ ರಿಕ್ಷಾ ಚಾಲಕರು ಮೇಲ್ಸೇತುವೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಆ ವೇಳೆ ಸ್ಥಳಕ್ಕಾಗಮಿಸಿದ ನಗರ ಠಾಣೆಯ ಅಪರಾಧ ವಿಭಾಗದ ಎಸ್ಸೈ ಸುಧಾಕರ್ ಸರಕಾರಿ ಬಸ್ ನಿಲ್ದಾಣದ ಬಳಿ ಮೂರು ರಿಕ್ಷಾಗಳಿಗೆ ಅವಕಾಶ ಕಲ್ಪಿಸುವ ಭರವಸೆ ನೀಡಿ ಅವರನ್ನು ಸಮಾಧಾನಪಡಿಸಿದ್ದಾರೆ.

ಪ್ರಯಾಣಿಕರಿಗೆ ಸಂಕಷ್ಟ: ಈ ಮೊದಲು ವಿವಿಧೆಡೆಯಿಂದ ಬಸ್‌ಗಳು ಬಿ.ಸಿ.ರೋಡ್ ಸರ್ವಿಸ್ ರಸ್ತೆ ಜಂಕ್ಷನ್‌ಗೆಆಗಮಿಸಿಯೇ ಮುಂದೆ ತೆರಳುತ್ತಿದ್ದವು. ಇದರಿಂದ ಅಲ್ಲೇ ಪಕ್ಕದಲ್ಲಿರುವ ಮಿನಿ ವಿಧಾನಸೌಧದಲ್ಲಿರುವ ಸರಕಾರಿ ಕಚೇರಿ, ನ್ಯಾಯಾಲಯ, ಪೊಲೀಸ್ ಠಾಣೆ, ಮೆಸ್ಕಾಂ, ಕೃಷಿ, ತೋಟಗಾರಿಕೆ ಹೀಗೆ ಎಲ್ಲ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರಿಗೆ ಬಸ್ಸಿಳಿದು ಹೋಗಲು ಅನುಕೂಲವಾಗುತ್ತಿತ್ತು. ಅಲ್ಲದೆ, ಮಳೆ, ಬಿಸಿಲಿನ ಧಗೆಗೆ ಮೇಲ್ಸತುವೆಯಡಿ ನೆರಳಿಗೆ ನಿಂತುಕೊಳ್ಳಬಹುದಾಗಿತ್ತು. ಇದೀಗ ಬಸ್ ಪ್ರವೇಶ ನಿರ್ಬಂಧದಿಂದ ಮೇಲ್ಸೇತುವೆ ಎರಡು ತುದಿಯಲ್ಲಿ ಇಳಿದು ಪಾದಯಾತ್ರೆ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ಸರ್ವಿಸ್ ರಸ್ತೆಗೆ ಬಸ್ ಸಂಚಾರವನ್ನು ನಿರ್ಬಂಧಿಸಿರುವುದಕ್ಕೆ ಕೆಲವು ಆಟೊ ಚಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಆಟೊ ಚಾಲಕರೊಂದಿಗೆ ಮಾತುಕತೆ ನಡೆಸಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಪ್ರತ್ಯೇಕ ರಿಕ್ಷಾ ಪಾರ್ಕಿಂಗ್ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ. ಈ ನಿಟ್ಟಿನಲ್ಲಿ ಕೆಎಸ್ಸಾರ್ಟಿಸಿ ಮತ್ತು ಸ್ಥಳೀಯ ಪುರಸಭೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಆಟೊ ಚಾಲಕರಿಗೆ ಆಗುತ್ತಿರುವ ಅನಾನುಕೂಲತೆ ನಿವಾರಿಸಲು ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲಾಗುವುದು.

ಸೈದುಲು ಅಡಾವತ್, ಬಂಟ್ವಾಳ ಎಎಸ್ಪಿ

ಪೊಲೀಸರು ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ಅದು ಈಡೇರಿಸದೇ ಇದ್ದಲ್ಲಿ ಸಾರ್ವಜನಿಕ ಸಹಕಾರದೊಂದಿಗೆ ಎಲ್ಲ ಆಟೊ ಚಾಲಕರನ್ನು ಸೇರಿಸಿ ಪ್ರತಿಭಟನೆ ನಡೆಸಲಾಗುವುದು.

 ಶಂಸುದ್ದೀನ್ ಪಲ್ಲಮಜಲು, ಆಟೊ ಚಾಲಕರ ಯೂನಿಯನ್‌ನ ಉಪಾಧ್ಯಕ್ಷ

ಸಮಸ್ಯೆ ಪರಿಹರಿಸಬೇಕಾದ ಹಿರಿಯ ಪೊಲೀಸ್ ಅಧಿಕಾರಿಗಳು ವಾಸ್ತವ ಅರಿಯದೆ ಕಚೇರಿಯಲ್ಲೇ ಕುಳಿತು ಹೊರಡಿಸುವ ಆದೇಶದಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಸರ್ವಿಸ್ ರಸ್ತೆಯಲ್ಲಿ ಬಸ್‌ಗಳು ಸಂಚರಿಸುವುದರಿಂದ ಯಾವುದೇ ತೊಂದರೆಯಾಗದು. ಪೊಲೀಸರು ಬಸ್ ಸಂಚಾರಕ್ಕೆ ಮತ್ತೆ ಅನುವು ಮಾಡಿಕೊಡಬೇಕಾಗಿದೆ.

 ವಸಂತ ಕುಮಾರ್ ಬಿ.ಸಿ.ರೋಡ್, ಪ್ರಯಾಣಿಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News