ರಾಜೇಂದ್ರ ಕುಮಾರ್‌ಗೆ ಟಿಕೆಟ್ ಕೊಟ್ಟರೆ ಬಂಡಾಯ: ಜನಾರ್ದನ ಪೂಜಾರಿ

Update: 2019-03-14 08:57 GMT

ಮಂಗಳೂರು, ಮಾ.14: ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್‌ಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಹೈಕಮಾಂಡ್ ಟಿಕೆಟ್ ಕೊಟ್ಟರೆ ತಾನು ಬಂಡಾಯವಾಗಿ ಸ್ಪರ್ಧೆ ಮಾಡುವುದಾಗಿ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ನಗರದ ಖಾಸಗಿ ಹೊಟೇಲಿನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು ರಾಜೇಂದ್ರ ಕುಮಾರ್ ವಿರುದ್ಧ ಭ್ರಷ್ಟಾಚಾರದ ಆರೋಪವಿದೆ. ಅವರು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯರೂ ಅಲ್ಲ. ರಾಜ್ಯದ ಕೆಲವು ಕಾಂಗ್ರೆಸ್ ಮುಖಂಡರಿಗೆ ಹಣ ಕೊಟ್ಟು ಟಿಕೆಟ್‌ಗಾಗಿ ಲಾಬಿ ನಡೆಸಿದ್ದಾರೆ. ಗ್ರಾಮ ಪಂಚಾಯತ್ ಸದಸ್ಯರಾಗಲೂ ಯೋಗ್ಯರಲ್ಲದ ರಾಜೇಂದ್ರ ಕುಮಾರ್‌ಗೆ ಯಾವ ಕಾರಣಕ್ಕೂ ಹೈಕಮಾಂಡ್ ಟಿಕೆಟ್ ಕೊಡಬಾರದು. ಇನ್ನೆರಡು ದಿನದಲ್ಲಿ ತಾನು ದೆಹಲಿಗೆ ಹೋಗುವೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎ.ಕೆ.ಆ್ಯಂಟನಿ ಸಹಿತ ಪಕ್ಷದ ಹಿರಿಯ ಮುಖಂಡರನ್ನು ಭೇಟಿ ಮಾಡುವೆ. ರಾಜೇಂದ್ರ ಕುಮಾರ್‌ಗೆ ಟಿಕೆಟ್ ಕೊಡಬಾರದು ಎಂದು ತಿಳಿ ಹೇಳುವೆ. ಒಂದು ವೇಳೆ ಅವರಿಗೆ ಟಿಕೆಟ್ ಕೊಟ್ಟರೆ ತಾನು ಸ್ಪರ್ಧೆ ಮಾಡುವುದು ಖಚಿತ ಎಂದರು.

ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್‌ಗೆ ಟಿಕೆಟ್ ಕೊಟ್ಟರೆ ತಾನು ಬೆಂಬಲಿಸುವೆ. ಆದರೆ, ರಾಜೇಂದ್ರ ಕುಮಾರ್‌ಗೆ ಟಿಕೆಟ್ ಕೊಟ್ಟರೆ ಸುಮ್ಮನಿರಲಾರೆ. ಇನ್ನು ಐವನ್ ಡಿಸೋಜ ಕೂಡ ಟಿಕೆಟ್‌ಗಾಗಿ ಲಾಬಿ ಮಾಡುತ್ತಿರುವ ವಿಚಾರ ತಿಳಿದಿದೆ. ಅವರಿಗೆ ಟಿಕೆಟ್ ಸಿಗುವುದಿಲ್ಲ. ಒಂದು ವೇಳೆ ಅವರಿಗೆ ಕೊಟ್ಟರೂ ಕೂಡ ತಾನು ಸುಮ್ಮನಿರಲಾರೆ. ಅವರ ವಿರುದ್ಧವೂ ಸ್ಪರ್ಧಿಸುವೆ ಎಂದು ಜನಾರ್ದನ ಪೂಜಾರಿ ನುಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News