ಕಾಸರಗೋಡು : ಹತ್ಯೆಗೀಡಾದ ಯುವ ಕಾಂಗ್ರೆಸ್ ಕಾರ್ಯಕರ್ತರ ಮನೆಗೆ ರಾಹುಲ್ ಗಾಂಧಿ ಭೇಟಿ

Update: 2019-03-14 16:24 GMT

ಕಾಸರಗೋಡು : ಹತ್ಯೆಗೀಡಾದ ಯುವ ಕಾಂಗ್ರೆಸ್ ಕಾರ್ಯಕರ್ತರಾದ  ಕೃಪೇಶ್  ಮತ್ತು ಶರತ್ ಲಾಲ್ ಅವರ ಪೆರಿಯ ಕಲ್ಯೊಟ್ ನಲ್ಲಿರುವ ಮನೆಗಳಿಗೆ  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಭೇಟಿ ನೀಡಿ, ಮನೆಯವರಿಗೆ ಸಾಂತ್ವನ ತುಂಬಿದರು.

ಕಣ್ಣೂರಿನಿಂದ  ಹೆಲಿಕಾಪ್ಟರ್ ಮೂಲಕ ಪೆರಿಯ ಕೇಂದ್ರ ವಿದ್ಯಾಲಯದ ಹೆಲಿಪ್ಯಾಡ್ ನಲ್ಲಿ ಬಂದಿಳಿದ ರಾಹುಲ್ ಗಾಂಧಿ ಮಧ್ಯಾಹ್ನ ಕಲ್ಯೊಟ್ ನಲ್ಲಿರುವ  ಕೃಪೇಶ್ ಮನೆಗೆ ತಲುಪಿ ಕುಟುಂಬದವರಿಗೆ ಧೈರ್ಯ ತುಂಬಿದರು ಮತ್ತು ಅವರಿಂದ ಮಾಹಿತಿ  ಪಡೆದುಕೊಂಡರು.  ಕೃಪೇಶ್ ಅವರ ಗುಡಿಸಲು ಮನೆಯನ್ನು ಕಂಡು ರಾಹುಲ್ ಗಾಂಧಿ ಮರುಗಿದರು. ಮನೆಯಿಂದ ಹೊರ ಬಂದ ರಾಹುಲ್ ಗಾಂಧಿ ಕೃಪೇಶ್ ಕುಟುಂಬಕ್ಕೆ ಶಾಸಕ ಹೈಬಿ ಈಡನ್ ನೇತೃತ್ವದಲ್ಲಿ  ನಿರ್ಮಾಣವಾಗುತ್ತಿರುವ ಮನೆಯನ್ನು ಪರಿಶೀಲನೆ ನಡೆಸಿದರು. ಬಳಿಕ ಶರತ್ ಲಾಲ್ ಅವರ ಮನೆಗೂ ಭೇಟಿ ನೀಡಿದರು.

ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಎಸ್ ಪಿಜಿ, ವಿಶೇಷ ಭದ್ರತಾ ಪಡೆ ಸೇರಿದಂತೆ ಭದ್ರತೆ ಏರ್ಪಡಿಸಲಾಗಿತ್ತು. ಮನೆಯೊಳಗೆ ಕಾಂಗ್ರೆಸ್ ನ ಪ್ರಮುಖ ನಾಯಕರು ಹೊರತುಪಡಿಸಿ ಮಾಧ್ಯಮದವರಿಗೆ ಸೇರಿದಂತೆ ಯಾರಿಗೂ ಪ್ರವೇಶ ಇರಲಿಲ್ಲ. ರಾಹುಲ್  ಗಾಂಧಿ  ಭೇಟಿ  ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಸ್ಥಳಕ್ಕೆ ತಲುಪಿದ್ದರು.

ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ, ಕೆಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್,  ಮುಕುಲ್ ವಾಸ್ನಿಕ್ ಮೊದಲಾದ ಮುಖಂಡರು ರಾಹುಲ್ ಗಾಂಧಿ  ಜೊತೆಗಿದ್ದರು.

ಇದಕ್ಕೂ ಮೊದಲು ಕಳೆದ ಆಗಸ್ಟ್ ನಲ್ಲಿ ಕಣ್ಣೂರು ಮಟ್ಟನ್ನೂರಿನಲ್ಲಿ ಕೊಲೆಗೀಡಾದ  ಯುವ ಕಾಂಗ್ರೆಸ್ ಕಾರ್ಯಕರ್ತ ಶುಹೈಬ್ ಕುಟುಂಬಸ್ಥರನ್ನು ಭೇಟಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News