ಅಪಘಾತ: ಒಬ್ಬನ ಸಾವಿಗೆ ಕಾರಣವಾದ ಚಾಲಕನಿಗೆ ಶಿಕ್ಷೆ

Update: 2019-03-14 16:07 GMT

ಉಡುಪಿ, ಮಾ.14:  ಮೂರು ವರ್ಷಗಳ ಹಿಂದೆ ಅಂಜಾರು ಗ್ರಾಮದ ಗೋಪಂ ನಿವಾಸದ ಎದುರು ಉಡುಪಿ-ಹಿರಿಯಡ್ಕ ರಸ್ತೆಯಲ್ಲಿ ಮೋಟಾರು ಸೈಕಲ್‌ನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತಿದ್ದ ಪಾದಚಾರಿಯ ಸಾವಿಗೆ ಕಾರಣರಾದ ಚಾಲಕನಿಗೆ ಉಡುಪಿಯ ಪ್ರಧಾನ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಅಲೆವೂರಿನ ತಾಳಿಕಟ್ಟೆ ಮನೆಯ ದೀಪಕ್ ಎಂಬವರು 2016ರ ಫೆ.8ರ ಬೆಳಗ್ಗೆ 7:20ರ ಸುಮಾರಿಗೆ ತನ್ನ ವಾಹನವನ್ನು ಅತೀ ವೇಗದಲ್ಲಿ ಚಲಾಯಿಸಿ ನಡೆದುಕೊಂಡು ಹೋಗುತಿದ್ದ ಪಕೀರಪ್ಪ ಎಂಬವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಇದರಿಂದ ತೀವ್ರವಾಗಿ ಗಾಯಗೊಂಡ ಪಕೀರಪ್ಪ ಹಿರಿಯಡ್ಕ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಈ ಬಗ್ಗೆ ಹಿರಿಯಡ್ಕ ವೃತ್ತ ನಿರೀಕ್ಷಕ ಅರುಣ್ ಬಿ ನಾಯಕ್ ತನಿಖೆ ನಡೆಸಿ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಉಡುಪಿ ಪ್ರಧಾನ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ, ಪೂರಕ ಸಾಕ್ಷ್ಯ ಹಾಗೂ ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶ ಇರ್ಫಾನ್ ಅವರು ಆರೋಪಿ ವಿರುದ್ಧದ ಪ್ರಕರಣ ಸಾಬೀತಾಗಿದೆ ಎಂದು ತೀರ್ಮಾನಿಸಿ ಆರೋಪಿಗೆ ಒಂದು ವರ್ಷ 3ತಿಂಗಳು ಶಿಕ್ಷೆ ಹಾಗೂ ಒಟ್ಟು ರೂ.3,500 ದಂಡ ವಿಧಿಸಿ, ಮಾ.13ರಂದು ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಕೆ. ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News