ಕಾರ್ಕಳ: ಕೃಷಿ ಸಂಬಂಧ ಜಾನುವಾರು ಸಾಗಾಟಕ್ಕೆ ಬಜರಂಗದಳದಿಂದ ಅಡ್ಡಿ

Update: 2019-03-14 17:32 GMT
ಸಾಂದರ್ಭಿಕ ಚಿತ್ರ

ಕಾರ್ಕಳ, ಮಾ.14: ಕೃಷಿ ಸಂಬಂಧಿ ಚಟುವಟಿಕೆಗಾಗಿ ಜಾನುವಾರುಗಳನ್ನು ಕೊಂಡೊಯ್ಯುತ್ತಿದ್ದ ರೈತರೋರ್ವನನ್ನು ಬಜರಂಗ ದಳದ ಕಾರ್ಯಕರ್ತರು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ಈದು ಎಂಬಲ್ಲಿ ಇಂದು ರಾತ್ರಿ ನಡೆದಿದೆ.

ಘಟನೆ ವಿವರ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬನ್ನಳ್ಳಿ ಗ್ರಾಮದ ರೈತ ಶಿವು ಎಂಬವರು ಕೃಷಿ ಚಟುವಟಿಕೆಗೆ ಜಾನುವಾರು ಖರೀದಿಗಾಗಿ ಚಾಲಕ ಪ್ರೇಮ್ ಕುಮಾರ್ ಎಂಬವರ ಜೊತೆ ಟೆಂಪೊದಲ್ಲಿ ಕಾರ್ಕಳ ತಾಲೂಕಿನ ಮಾಳ ಎಂಬಲ್ಲಿಗೆ ಇಂದು ಮಧ್ಯಾಹ್ನ ಆಗಮಿಸಿದ್ದರು.

ಅಲ್ಲಿ ನಾಗರಾಜ ಪೂಜಾರಿ ಎಂಬವರಿಂದ 50 ಸಾವಿರ ರೂ. ನಗದು ನೀಡಿ ಏಳು ಜಾನುವಾರು ಮತ್ತು ಕರುವೊಂದನ್ನು ಖರೀದಿಸಿದ್ದರು. ಹೀಗೆ ಖರೀದಿಸಿದ ಜಾನುವಾರುಗಳನ್ನು ಶಿವು ಟೆಂಪೊದಲ್ಲಿ ಹೇರಿಕೊಂಡು ಮಂಡ್ಯದತ್ತ ಹೊರಟಿದ್ದ ವೇಳೆ ಬಜರಂಗ ದಳದ ಕಾರ್ಯಕರ್ತರು ತಡೆದಿದ್ದಾರೆ ಎಂದು ದೂರಲಾಗಿದೆ.

ಈದು ಎಂಬಲ್ಲಿ ಬೈಕಿನಲ್ಲಿ ಬಂದ ಬಜರಂಗ ದಳದ ಕಾರ್ಯಕರ್ತರು ಶಿವು ಅವರ ಟೆಂಪೊವನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಈ ವೇಳೆ 25 ರಿಂದ 30ರಷ್ಟು ಬಜರಂಗ ದಳದ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಶಿವು ಅವರನ್ನು ಜಾನುವಾರು ಬಗ್ಗೆ ಪ್ರಶ್ನಿಸಿದ್ದಾರೆ. ಕೃಷಿ ಚಟುವಟಿಕೆಗಾಗಿ ಖರೀದಿಸಿ ಕೊಂಡೊಯ್ಯುತ್ತಿರುವುದಾಗಿ ಶಿವು ಸ್ಪಷ್ಟಪಡಿಸಿದಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಜರಂಗದಳದವರು ಕೇಳಿ ಪರಿಶೀಲಿಸಿದ್ದಾರೆ. ಬಳಿಕ ಬಜರಂಗ ದಳ ಕಾರ್ಯಕರ್ತರು ಕಾರ್ಕಳ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಶಿವು, ಚಾಲಕ ಪ್ರೇಮ್ ಕುಮಾರ್ ಹಾಗೂ ಜಾನುವಾರುಗಳ ಸಹಿತ ಟೆಂಪೊವನ್ನು ಠಾಣೆಗೆ ಕರೆದೊಯ್ದಿದ್ದಾರೆ. ಜಾನುವಾರು ಖರೀದಿಗೆ ಸಂಬಂಧಿಸಿದ ದಾಖಲೆಗಳನ್ನೆಲ್ಲ ಪರಿಶೀಲಿಸಿ ಖಚಿತಪಡಿಸಿದ್ದಾರೆ. ಅಲ್ಲದೇ, ಮಂಡ್ಯದ ರೈತ ಮುಖಂಡರಿಗೆ ದೂರವಾಣಿ ಕರೆ ಮಾಡಿ ಶಿವು ಕೃಷಿಕ ಎಂಬುದನ್ನು ದೃಢಪಡಿಸಿಕೊಂಡು ಅವರನ್ನು ಜಾನುವಾರು ಸಹಿತ ಹೋಗಲು ಬಿಟ್ಟಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾವು ಹಲವಾರು ವರ್ಷಗಳಿಂದ ಕೃಷಿ ಮಾಡುತ್ತಿದ್ದೇವೆ. ಈ ಬಾರಿ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಹೊಸ ಪದ್ಧತಿಯ ಅನುಸರಿಸಿ ಕೃಷಿ ಮಾಡುತ್ತಿದ್ದೇವೆ. ಅದಕ್ಕಾಗಿ ಜಾನುವಾರು ಖರೀದಿಗೆ ಕಾರ್ಕಳಕ್ಕೆ ಬಂದಿದ್ದೆವು. ನಾವು ಅಕ್ರಮವಾಗಿ ಜಾನುವಾರ ಸಾಗಾಟ ಮಾಡಿಲ್ಲ. ಜಾನುವಾರು ಖರೀದಿಗೆ ಸಂಬಂಧಿತ ಎಲ್ಲ ದಾಖಲೆಗಳಿವೆ. ನಮಗೆ ಅಡ್ಡಿಪಡಿಸಿದ ಬಜರಂಗ ದಳದವರಿಗೂ ಅದನ್ನು ತೋರಿಸಿದ್ದೇವೆ.

-ಶಿವು, ಮಂಡ್ಯದ ಕೃಷಿಕ

ಬನ್ನಳ್ಳಿ ಗ್ರಾಮದ ರೈತ ಶಿವು ಎಂಬವರು ಕೃಷಿ ಸಂಬಂಧಿ ಚಟುವಟಿಕೆಗಾಗಿ ಜಾನುವಾರುಗಳನ್ನು ಖರೀದಿಸಿ ಬರುತ್ತಿದ್ದ ವೇಳೆ  ಕಾರ್ಕಳ ಪೊಲೀಸ್ ಠಾಣೆ ವ್ಯಾಪ್ತಿಯ ಬಜರಂಗ ದಳದ ಕಾರ್ಯಕರ್ತರು ಅವರನ್ನು ತಡೆದಿದ್ದು, ಈ ಸಂದರ್ಭ ಶಿವು ಅವರು ತಮ್ಮ ಸ್ಥಳೀಯ ಪಂಚಾಯತ್ ಗಳಿಂದ ಸಂಬಂಧಪಟ್ಟ ದೃಢೀಕರಣ ಪತ್ರವನ್ನು ಬಜರಂಗದಳದ ಕಾರ್ಯಕರ್ತರಿಗೆ ತೋರಿಸಿದ್ದು, ನಂತರ ಪೊಲೀಸ್ ಠಾಣೆಗೂ ಮಾಹಿತಿ ನೀಡಿದ್ದರು. ಆದರೆ ಬಜರಂಗದಳ ಕಾರ್ಯಕರ್ತರು ಶಿವು ಅವರಿಗೆ ಕಿರುಕುಳ ನೀಡಿ, ನಂತರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಇದು ರೈತರ ಸಂಘ ಖಂಡಿಸುತ್ತಿದ್ದು, ರೈತರಿಗೆ ಕಿರುಕುಳ ನೀಡಿದ ಬಜರಂಗದಳ ಕಾರ್ಯಕರ್ತರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತದೆ.

ಟಿ. ಯಶವಂತ
- ಕರ್ನಾಟಕ ಪ್ರಾಂತ ರೈತ ಸಂಘ, ಮಂಡ್ಯ ಜಿಲ್ಲಾ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News