ಲೋಕಸಭಾ ಚುನಾವಣೆ: ದ.ಕ. ಜಿಲ್ಲಾಡಳಿತದಿಂದ ವಿನೂತನ ಪ್ರಯೋಗ

Update: 2019-03-15 10:51 GMT

ಮಂಗಳೂರು, ಮಾ.15: ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಮತಗಟ್ಟೆಗೆ ಓಲೈಸಲು ಹಾಗೂ ಮತದಾರರಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿರುವ ದ.ಕ. ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ಹಿರಿಯ ನಾಗರಿಕರಿಗೆ ಕೆಲ ಪ್ರದೇಶಗಳಲ್ಲಿ ಪ್ರತ್ಯೇಕ ಮತಗಟ್ಟೆಗಳನ್ನು ಗುರುತಿಲು ಮುಂದಾಗಿದೆ.

ಜಿಲ್ಲಾ ಪಂಚಾಯತ್‌ನ ಕಾರ್ಯನಿರ್ವಹಣಾಧಿಕಾರಿ ಸೆಲ್ವಮಣಿಯವರು ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದರು.

ಹಿರಿಯ ನಾಗರಿಕರಿಗಾಗಿ ಈ ಬಾರಿ 5ರಿಂದ 10 ಕಡೆಗಳಲ್ಲಿ ವಿಶೇಷ ಮತಗಟ್ಟೆಗಳನ್ನು ಒದಗಿಸಲಾಗುವುದು. ಇಲ್ಲಿ ಗಾಲಿಚಕ್ರ, ವಾಕಿಂಗ್ ಸ್ಟಿಕ್, ವಾಕರ್‌ಗಳ ವ್ಯವಸ್ಥೆ ಹಾಗೂ ಎನ್‌ಸಿಸಿಯ ಸ್ವಯಂ ಸೇವಕರನ್ನು ಹಿರಿಯ ನಾಗರಿಕರ ನೆರವಿಗೆ ನಿಯೋಜಿಸಲಾಗುವುದು. ಇಂತಹ ಪ್ರಯೋಗ ರಾಜ್ಯದ ಇತರ ಯಾವುದೇ ಜಿಲ್ಲೆಗಳಲ್ಲಿ ಇದುವರೆಗೆ ಮಾಡಿರುವ ಬಗ್ಗೆ ಅರಿವಿಲ್ಲ. ದ.ಕ. ಜಿಲ್ಲಾಡಳಿತದ ವತಿಯಿಂದ ಇದೊಂದು ಹೊಸ ಪ್ರಯೋಗ. ಅದರ ಜತೆಗೆ ಈ ಹಿಂದಿನ ವಿಧಾನಸಭೆಯಲ್ಲಿ ಕಲ್ಪಿಸಲಾದಂತೆ ವಿಕಲಚೇತನರಿಗೆ, ಬುಡಕಟ್ಟು ಜನರಿರುವ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಶೈಲಿಯ ಮತಗಟ್ಟೆಗಳು ಇರಲಿವೆ ಎಂದು ಅವರು ತಿಳಿಸಿದರು.

ಸೈಕ್ಲೋತಾನ್, ವಾಕತಾನ್

ಮತದಾನಕ್ಕೆ ಮತದಾರರನ್ನು ಪ್ರೇರೇಪಿಸಲು ಸೈಕ್ಲತಾನ್ ಹಾಗೂ ವಾಕತಾನ್‌ಗಳನ್ನು ಕೂಡಾ ಆಯೋಜಿಸಲಾಗುತ್ತಿದ್ದು, ಇದು ಸುಮಾರು 18 ಕಿ.ಮೀ.ಗಳ ಕಾರ್ಯಕ್ರಮವಾಗಿರುತ್ತದೆ. ಮಾ. 23 ಮತ್ತು 24ರಂದು ಕಡಲ ತೀರದಲ್ಲಿ ಗಾಳಿಪಟ ಉತ್ಸವದ ಮೂಲಕ ಮತದಾನದ ಬಗ್ಗೆ ಜಾಗೃತಿ, ಮರಳು ಶಿಲ್ಪಗಳ ಮೂಲಕ ಮತದಾರರನ್ನು ಆಕರ್ಷಿಸಲು ಪ್ರಯತ್ನಿಸಲಾಗುವುದು ಎಂದು ಸೆಲ್ವಮಣಿ ವಿವರಿಸಿದರು.

ಮಹಿಳಾ ಮತದಾರರು ಅಧಿಕವಿರುವ ಸ್ಥಳಗಳಲ್ಲಿ ಈ ಬಾರಿ ಮತಗಟ್ಟೆಗಳನ್ನು ಗುಲಾಬಿ ಮತಗಟ್ಟೆಯಾಗಿ ರೂಪಿಸಲಾಗುವುದು. ಅಲ್ಲಿನ ಸಿಬ್ಬಂದಿಯೆಲ್ಲಾ ಮಹಿಳೆಯರಾಗಿದ್ದು, ಈ ಬಾರಿ 25 ಕಡೆಗಳಲ್ಲಿ ಇಂತಹ ಮತಗಟ್ಟೆಗಳನ್ನು ರೂಪಿಸಲು ಯೋಜಿಸಲಾಗಿದೆ. ವಿಕಲಚೇತನರಿಗಾಗಿ ಕೆಲವು ಕಡೆ ವಿಶೇಷ ಮತಟ್ಟೆಗಳಲ್ಲಿ ರ್ಯಾಂಪ್‌ಗಳ ನಿರ್ಮಾಣಕ್ಕೂ ಅವಕಾಶ ಒದಗಿಸಲಾಗುವುದು ಎಂದು ಅವರು ಹೇಳಿದರು.

ಮತದಾರರ ಸಾಕ್ಷರತಾ ಸಂಘ

ಜಿಲ್ಲೆಯಾದ್ಯಂತ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜು, ಪದವಿ ಕಾಲೇಜುಗಳು, ವೈದ್ಯಕೀಯ ಹಾಗೂ ಪಾಲಿಟೆಕ್ನಿಕ್ ಸಂಸ್ಥೆಗಳಲ್ಲಿ ಮತದಾರರ ಸಾಕ್ಷರತಾ ಸಂಘಗಳನ್ನು ಸ್ಥಾಪಿಸಲಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲನೆಗಾಗಿ ಮಾಹಿತಿ ಒದಗಿಸಲು ಅಬಿಯಾನವನ್ನು ಎಲ್ಲಾ ಸಂಸ್ಥೆಗಳಲ್ಲೂ ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಕ್ಯಾಂಪಸ್ ರಾಯಭಾರಿಗಳು

ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕ್ಯಾಂಪಸ್ ರಾಯಭಾರಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ 80 ಇಂತಹ ರಾಯಭಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಸೆಲ್ವಮಣಿ ಮಾಹಿತಿ ಒದಗಿಸಿದರು.

ಮತದಾರರ ಜಾಗೃತ ವೇದಿಕೆ

ಇದೇ ಒದಲ ಬಾರಿಗೆ ಮತದಾರರ ಜಾಗೃತ ವೇದಿಕೆಯನ್ನು ಸರಕಾರಿ, ಅರೆಸರಕಾರಿ, ಕೇಂದ್ರ, ರಾಜ್ಯ, ಸ್ಥಳೀಯ ಸಂಸ್ಥೆಗಳು, ಸಹಕಾರಿ ಸಂಸೆ್ಥಗಳ ಕಚೇರಿಗಳಲ್ಲಿ ಸ್ಥಾಪಿಸಲಾಗಿದೆ.

ಚುನಾವ್ ಪಾಠಶಾಲಾ

ಮತಗಟ್ಟೆ ಹಂತದಲ್ಲಿ ಪರಿಸರದ ಸಾರ್ವಜನಿಕರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯ 1861 ಮತಗಟ್ಟೆಗಳಲ್ಲಿ ಚುನಾವ್ ಪಾಠಶಾಲಾ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಮತಗಟ್ಟೆ ಅಧಿಕಾರಿಗಳಿಗೆ ಈ ತಿಂಗಳಲ್ಲಿ ಒಂದು ದಿನ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೆಲ್ವಮಣಿ ತಿಳಿಸಿದರು.

ಅಪಾರ್ಟ್‌ಮೆಂಟ್‌ಗಳಿಗೆ ವಿಶೇಷ ಒತ್ತು

ಈ ಬಾರಿ ಚುನಾವಣೆಯಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿರುವ ಮತದಾರರಿಗೂ ಹೆಚ್ಚಿನ ಒತ್ತು ನೀಡಲಾಗುವುದು. ಅವರನ್ನು ಮತದಾನಕ್ಕೆ ಪ್ರೇರೇಪಿಸುವ ಉದ್ದೇಶದಿಂದ ಶೇ. 100ರಷ್ಟು ಮತದಾನಕ್ಕೆ ನೋಂದಾವಣೆ ಮಾಡುವ ಅಪಾರ್ಟ್‌ಮೆಂಟ್‌ಗಳಿಗೆ ಸ್ಮರಣಿಕೆ ಹಾಗೂ ಶೇ. 100ರಷ್ಟು ಮತದಾರರು ಮತದಾನ ಮಾಡುವ ಅಪಾರ್ಟ್‌ಮೆಂಟ್‌ಗೆ ಶೀಲ್ಡ್‌ಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಸೆಲ್ವಮಣಿ ತಿಳಿಸಿದರು.

ವಿವಿಧ ಕಡೆಗಳಲ್ಲಿ ಇವಿಎಂ ಯಂತ್ರ, ವಿವಿಪ್ಯಾಟ್‌ಗಳ ಪ್ರಾತ್ಯಕ್ಷಿಕೆ

ಮತದಾರರಿಗೆ ಇವಿಎಂ ಯಂತ್ರಗಳ ಬಳಕೆ ಹಾಗೂ ವಿವಿ ಪ್ಯಾಟ್‌ಗಳ ಬಗ್ಗೆ ಮಾಹಿತಿ ನೀಡುವುದಕ್ಕಾಗಿ ನಗರದ ಮಹಾನಗರ ಪಾಲಿಕೆ ಕಚೇರಿ ಹಾಗೂ ಮಾಲ್‌ಗಳಲ್ಲಿ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈಗಾಗಲೇ ಮಹಾನಗರ ಪಾಲಿಕೆಯಲ್ಲಿ ನಿನ್ನೆಯಿಂದ ಈ ಪ್ರಾತ್ಯಕ್ಷಿಕೆ ಆರಂಭಗೊಂಡಿದೆ. ನಾಳೆಯಿಂದ ಮಾಲ್‌ಗಳಲ್ಲಿ ಆರಂಭಿಸಲಾಗುವುದು. ಮುಂದೆ ಕದ್ರಿ ಪಾರ್ಕ್ ಸೇರಿದಂತೆ ಹೆಚ್ಚು ಜನ ಸೇರುವ ಪ್ರದೇಶಗಳಲ್ಲೂ ಈ ಪ್ರಾತ್ಯಕ್ಷಿಕೆ ನೆಯಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News