ಟೋಯಿಂಗ್ ಮೂಲಕ ನೋ ಪಾರ್ಕಿಂಗ್ ವಾಹನಗಳ ಎತ್ತಂಗಡಿ ತೀವ್ರ : ಸಂದೀಪ್ ಪಾಟೀಲ್

Update: 2019-03-15 12:17 GMT

ಮಂಗಳೂರು, ಮಾ.15: ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುವ ವಾಹನಗಳ ಎತ್ತಂಗಡಿ ಕಾರ್ಯಾಚರಣೆಯನ್ನು ಚುರುಕುಗೊಳಿಸಿರುವ ಪೊಲೀಸ್ ಸಂಚಾರ ವಿಭಾಗವು ಕಳೆದೊಂದು ವಾರದಲ್ಲಿ 41 ವಾಹನಗಳ ಮಾಲಕರ ವಿರುದ್ಧ ಕ್ರಮ ಜರುಗಿಸಿದೆ. ಈಗಾಗಲೆ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಂದು ಟೋಯಿಂಗ್‌ವಿದ್ದು, ಇದೀಗ ಶುಕ್ರವಾರದಿಂದ ಮತ್ತೊಂದು ಟೋಯಿಂಗ್ ವಾಹನ ಸೇರ್ಪಡೆಯಾಗಿದೆ. ಸಂಚಾರ ಪೂರ್ವ ಹಾಗೂ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಎರಡು ವಾಹನಗಳು ಕಾರ್ಯಾಚರಣೆ ನಡೆಸಲಿವೆ. ಮಾರ್ಚ್ ಅಂತ್ಯಕ್ಕೆ ಮೂರನೇ ಟೋಯಿಂಗ್ ವಾಹನ ಆಯುಕ್ತಾಲಯ ವ್ಯಾಪ್ತಿಗೆ ಸೇರ್ಪಡೆಯಾಗಲಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದರು.

ಪೊಲೀಸ್ ಆಯುಕ್ತಾಲಯದಲ್ಲಿ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರಿಗೆ ಸ್ಪಂದಿಸಿ ಅವರು ಮಾತನಾಡಿದರು.

ನಗರದಲ್ಲಿ ಕೆಲವು ಕಡೆ ಅನಧಿಕೃತವಾಗಿ ವಾಹನ ಪಾರ್ಕಿಂಗ್ ನಡೆಯುತ್ತಿದೆ. ಶಕ್ತಿನಗರ, ಕಂಕನಾಡಿ-ಜೆಪ್ಪುರಸ್ತೆಯಲ್ಲೇ ವಾಹನ ಪಾರ್ಕಿಂಗ್ ಮಾಡುತ್ತಿದ್ದಾರೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರೊಬ್ಬರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್ ಸಂದೀಪ್ ಪಾಟೀಲ್, ಈಗಾಗಲೇ ಅನಧಿಕೃತ ಪಾರ್ಕಿಂಗ್‌ಗಳಲ್ಲಿ ನಿಲ್ಲಿಸಿದ ವಾಹನಗಳನ್ನು ತೆರವುಗೊಳಿಸಲು ಟೋಯಿಂಗ್ ವಾಹನ ಬಳಸಲಾಗುತ್ತಿದೆ. ಶುಕ್ರವಾರ ಎರಡನೆ ಟೋಯಿಂಗ್ ವಾಹನ ಕಾರ್ಯಾಚರಿಸಿದರೆ, ಈ ತಿಂಗಳಾಂತ್ಯಕ್ಕೆ ಮೂರನೇ ವಾಹನ ಸೇರ್ಪಡೆಗೊಳ್ಳಲಿದೆ ಎಂದು ಸಂದೀಪ್ ಪಾಟೀಲ್ ನುಡಿದರು.

ಸುಗಮ ಸಂಚಾರಕ್ಕೆ ನಗರದ ಅಲ್ಲಲ್ಲಿ ರಸ್ತೆಗೆ ಹಂಪ್ಸ್ ಅಳವಡಿಸಲಾಗಿದೆ. ಆದರೆ ಕೆಲವು ಕಡೆ ಅವೈಜ್ಞಾನಿಕವಾಗಿ ಹಂಪ್ಸ್ ಅಳವಡಿಸಿದ್ದರೆ, ಇನ್ನೂ ಕೆಲವು ಕಡೆ ಹಂಪ್ಸ್ ಹಾಕಬೇಕಾಗಿದೆ ಎಂದು ನಾಗರಿಕರು ಅಭಿಪ್ರಾಯಪಟ್ಟರು. ಕೊಟ್ಟಾರ ಮೇಲ್ಸೇತುವೆಯ ಕೆಳಗೆ ಸಂಚಾರ ನಿಯಂತ್ರಿಸಲು ಹಂಪ್ಸ್ ಅಳವಡಿಸಬೇಕು. ಅಲ್ಲಿ ಚೆಕ್ ಪೋಸ್ಟ್ ಹಾಕಿರುವುದರಿಂದ ಇಕ್ಕಟ್ಟಿನ ರಸ್ತೆಯಲ್ಲಿ ಪಾದಚಾರಿಗಳಿಗೆ ಸಂಚರಿಸಲು ತೊಂದರೆಯಾಗುತ್ತಿದೆ ಎಂದು ಹಿರಿಯ ನಾಗರಿಕರೊಬ್ಬರು ದೂರಿದರು. ಚೆಕ್ ಪೋಸ್ಟ್ ತೆರವುಗೊಳಿಸುವುದು ಸಾಧ್ಯವಿಲ್ಲ. ಆದರೆ ಬೇರೆ ಸ್ಥಳಕ್ಕೆ ವರ್ಗಾಯಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸಂದೀಪ್ ಪಾಟೀಲ್ ಸ್ಪಷ್ಟಪಡಿಸಿದರು.

ಉರ್ವಸ್ಟೋರ್, ಮಾರಿಗುಡಿ, ಅಶೋಕನಗರ, ಜಲ್ಲಿಗುಡ್ಡೆಯಲ್ಲಿ ಹಂಪ್ಸ್‌ಗಳನ್ನು ಹಾಕಬೇಕಾಗಿದೆ. ಬಜ್ಪೆಯಲ್ಲಿ ಝೀಬ್ರಾ ಕ್ರಾಸ್ ಅಳವಡಿಸಬೇಕು. ಉರ್ವಸ್ಟೋರ್ ಬಳಿ ಹಂಪ್ಸ್ ಅಳವಡಿಕೆಯಿಂದ ಸವಾರರಿಗೆ ತೊಂದರೆಯಾಗುತ್ತಿದೆ ಎಂಬ ದೂರು ಕೇಳಿ ಬಂತು. ಅಲ್ಲದೆ ನಗರದ ಕೆಲವು ಕಡೆಗಳಲ್ಲಿ ಝೀಬ್ರಾ ಕ್ರಾಸಿಂಗ್‌ನ ಬಣ್ಣ ಮಾಸಿ ಹೋಗಿದೆ. ಹಂಪ್ಸ್‌ಗಳು ಕೂಡ ಕಿತ್ತು ಹೋಗಿದೆ. ಇದನ್ನು ಸರಿಪಡಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದರು.

ಈಗಾಗಲೇ ಅಗತ್ಯವಿರುವ ಕಡೆಗಳಲ್ಲಿ ಹಂಪ್ಸ್ ನಿರ್ಮಿಸಲಾಗಿದೆ. ಉಳಿದ ಕಡೆಗಳಲ್ಲಿ ಹಂಪ್ಸ್ ಅಳವಡಿಸಲಾಗುವುದು. ಹಳೆ ಝೀಬ್ರಾ ಕ್ರಾಸ್‌ಗಳಿಗೆ ಬಣ್ಣಬಳಿಯಲು ಸೂಚನೆ ನೀಡಲಾಗುವುದು ಎಂದು ಸಂದೀಪ್ ಪಾಟೀಲ್ ತಿಳಿಸಿದರು.

ಗುರುಪುರ ಕೈಕಂಬದಲ್ಲಿ ಪಾರ್ಕಿಂಗ್ ಸಮಸ್ಯೆ, ಬೈಕಂಪಾಡಿಯಲ್ಲಿ ಖಾಸಗಿ ಹಾಗೂ ಸರಕಾರಿ ಬಸ್‌ಗಳಿಗೆ ಒಂದೇ ಕಡೆ ನಿಲುಗಡೆಯಿಂದ ತೊಂದರೆ, ಮಂಗಳೂರು ಫಲಕ ಹಾಕಿಕೊಂಡು ಪಂಪ್‌ವೆಲ್‌ನಲ್ಲಿ ಅರ್ಧದಲ್ಲೇ ಪ್ರಯಾಣಿಕರನ್ನು ಇಳಿಸುವ ಖಾಸಗಿ ಬಸ್‌ಗಳ ಬಗ್ಗೆ ನಾಗರಿಕರು ದೂರು ನೀಡಿದರು.

ನಗರದ ಹಂಪನಕಟ್ಟೆ ಸಹಿತ ರಸ್ತೆ ಬದಿಗಳಲ್ಲಿ ಮತ್ತೆ ಭಿಕ್ಷುಕರ ಹಾವಳಿ ಆರಂಭವಾಗಿದೆ. ಇದರಿಂದಾಗಿ ಪಾದಚಾರಿಗಳ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಭಿಕ್ಷುಕರನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಲು ಮುಂದಾಗಬೇಕು ಎಂದು ಮಹಿಳೆಯೊಬ್ಬರು ಆಗ್ರಹಿಸಿದರು.

ಈ ಸಂದರ್ಭ ಪೊಲೀಸ್ ಉಪಾಯುಕ್ತರಾದ ಹನುಮಂತರಾಯ, ಉಮಾ ಪ್ರಶಾಂತ್, ಸಂಚಾರ ಉಪವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ, ಎಸಿಪಿ ವಿನಯ ಗಾಂವ್ಕರ್ ಉಪಸ್ಥಿತರಿದ್ದರು.

ನಿವೃತ್ತರನ್ನು ಚುನಾವಣಾ ಸೇವೆಗೆ ಬಳಸಿ

ಪೊಲೀಸ್ ಇಲಾಖೆಯಲ್ಲಿ ಸೇವೆಯಿಂದ ನಿವೃತ್ತರಾದ ಅಧಿಕಾರಿಗಳನ್ನು ಚುನಾವಣೆಯ ವೇಳೆ ಕರ್ತವ್ಯಕ್ಕೆ ಬಳಸಿಕೊಳ್ಳಬೇಕು. ಅವರ ಅನುಭವವನ್ನು ಬಳಸಿಕೊಂಡರೆ ಇನ್ನಷ್ಟು ಸುಲಭವಾದೀತು ಎಂದು ಹಿರಿಯ ನಾಗರಿಕರೊಬ್ಬರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News