ವಿಶ್ವ ಗ್ರಾಹಕ ಶಿಕ್ಷಣ-ಪ್ರಮಾಣಪತ್ರ ಪ್ರದಾನ

Update: 2019-03-15 11:03 GMT

ಮಂಗಳೂರು, ಮಾ.15: ದ.ಕ. ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಬೆಸೆಂಟ್ ಮಹಿಳಾ ಕಾಲೇಜು ಹಾಗೂ ಪಾಂಡೇಶ್ವರ ಲಯನ್ಸ್ ಕ್ಲಬ್‌ನ ಆಶ್ರಯದಲ್ಲಿ ವಿಶ್ವ ಗ್ರಾಹಕ ದಿನಾಚರಣೆ ಮತ್ತು ಗ್ರಾಹಕ ಶಿಕ್ಷಣ-ಪ್ರಮಾಣಪತ್ರ ಪ್ರದಾನ ಕಾರ್ಯಕ್ರಮವು ಶುಕ್ರವಾರ ನಗರದ ಕೊಡಿಯಾಲ್‌ಬೈಲ್ ಬೆಸೆಂಟ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಾಂಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ್ ದೇವಸಿಯಾ ಗ್ರಾಹಕರ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳು ಸಹಿತ ಪ್ರತಿಯೊಬ್ಬರಿಗೂ ಅರಿವಿರಬೇಕು. ಇದರಿಂದ ವ್ಯಾವಹಾರಿಕ ಕ್ಷೇತ್ರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿವಳಿಕೆ ಹೊಂದಬೇಕಿದೆ. ಸರಕುಗಳ ಯೋಗ್ಯತೆ, ಪ್ರಮಾಣ, ಸಾಮರ್ಥ್ಯ, ಶುದ್ಧತೆ, ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಅವುಗಳು ಕಳಪೆಯಾಗಿದ್ದ ಸಂದರ್ಭದಲ್ಲಿ ಪ್ರಶ್ನಿಸುವ ಗುಣ ಪ್ರತಿಯೊಬ್ಬರಲ್ಲಿರಬೇಕು. ಗ್ರಾಹಕರಿಗೆ ಅಹಿತಕರವಾದ ಉತ್ಪನ್ನಗಳನ್ನು ನಿಯಮಬಾಹಿರವಾಗಿ ಮಾರಾಟ ಮಾಡಿದಂತಹ ಸಂದರ್ಭದಲ್ಲಿ ಅದರ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳುವ ಅವಕಾಶವಿದೆ. ಆನ್‌ಲೈನ್ ತಾಣಗಳಲ್ಲಿ ಖರೀದಿಸುವ ಮುನ್ನ ಸಾಕಷ್ಟು ಎಚ್ಚರ ವಹಿಸಬೇಕು ಎಂದು ವಿನೋದ್ ದೇವಸಿಯಾ ನುಡಿದರು.

ಬೆಸೆಂಟ್ ಮಹಿಳಾ ಕಾಲೇಜು ಸಂಚಾಲಕ ಕೆ. ದೇವಾನಂದ್ ಪೈ ಅಧ್ಯಕ್ಷತೆ ವಹಿಸಿದ್ದರು. ಪಾಂಡೇಶ್ವರ ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಾಹಿನ್, ಬೆಸೆಂಟ್ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಸತೀಶ್ ಕುಮಾರ್ ಶೆಟ್ಟಿ ಪಿ., ಎಸ್‌ಡಿಎಂ ಬಿಬಿಎಂ ಕಾಲೇಜಿನ ಪ್ರಾಂಶುಪಾಲೆ ಅರುಣಾ ಪಿ. ಕಾಮತ್, ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಜು ಪ್ರಾಂಶುಪಾಲೆ ಡಾ. ಯು. ತಾರಾರಾವ್, ಕೆನರಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಕೆ. ವಿ. ಮಾಲಿನಿ,ಒಕ್ಕೂಟ ಕಾರ್ಯದರ್ಶಿ ವಿಷ್ಣು ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ. ಜೆ. ಸಾಲ್ಯಾನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಟಿ. ಮಂಜುನಾಥನ್ ಸ್ವಾಗತಿಸಿದರು. ಮಹಾಬಲೇಶ್ವರ ಹೆಬ್ಬಾರ್ ನಿರೂಪಿಸಿದರು.

ಪ್ರಶಸ್ತಿ-ಪ್ರಮಾಣಪತ್ರ ವಿತರಣೆ

ಕಾಲೇಜುಗಳಲ್ಲಿ ನಡೆಸುವ ಗ್ರಾಹಕ ಶಿಕ್ಷಣ ಸರ್ಟಿಫಿಕೇಟ್ ಕೋರ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದ ಕೆನರಾ ಕಾಲೇಜಿನ ಲಾವಣ್ಯಾಗೆ ಚಿನ್ನದ ಪದಕ, 2,500 ರೂ.ನಗದು ಸಹಿತ ಪ್ರಮಾಣಪತ್ರ ವಿತರಿಸಲಾಯಿತು. ದ್ವಿತೀಯ ಸ್ಥಾನ ಪಡೆದ ಬೆಸೆಂಟ್ ಮಹಿಳಾ ಕಾಲೇಜಿನ ವೈಷ್ಣವಿಗೆ ಬೆಳ್ಳಿ ಪದಕ, 1,500 ರೂ. ನಗದು ಹಾಗೂ ಪ್ರಮಾಣ ಪತ್ರ, ತೃತೀಯ ಸ್ಥಾನಿ ಕೆನರಾ ಕಾಲೇಜಿನ ಸ್ವಾತಿ ಕೆ. ಎಸ್.ಗೆ 1,000 ರೂ. ನಗದು ಸಹಿತ, ಕಂಚಿನ ಪದಕ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.

ಉತ್ತಮ ಪ್ರಾಜೆಕ್ಟ್ ವರ್ಕ್‌ಗಾಗಿ ಎಸ್‌ಡಿಎಂ ಕಾಲೇಜಿನ ಕೀರ್ತಿ ಶೆಟ್ಟಿ ಮತ್ತು ತಂಡ (ಪ್ರ), ಕೆನರಾ ಕಾಲೇಜಿನ ಶಿವಾನಿ ಮತ್ತು ತಂಡ (ದ್ವಿ), ಕೆನರಾ ಕಾಲೇಜಿನ ವರ್ಷಾ ಮತ್ತು ತಂಡ (ತೃ) ಬಹುಮಾನ ಪಡೆದರು. ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಉತ್ತಮ ಕಾಲೇಜು ಕ್ಲಬ್ ಪ್ರಶಸ್ತಿ, ಕೆನರಾ ಕಾಲೇಜು ದ್ವಿತೀಯ, ಎಸ್‌ಡಿಎಂ ತೃತೀಯ ಸ್ಥಾನ ಪಡೆಯಿತು. ಉತ್ತಮ ಕಾಲೇಜು ಸಂಯೋಜಕರು ವಿಭಾಗದಲ್ಲಿ ಕಾವೂರು ಕಾಲೇಜಿನ ಅವಿತಾ ಮರಿಯಾ ಕ್ವಾಡ್ರಸ್ (ಪ್ರ), ಕೆನರಾ ಕಾಲೇಜಿನ ಜಯಶ್ರೀ ಶೆಟ್ಟಿ ಮತ್ತು ಸ್ವಾತಿ ಕಾಮತ್ (ದ್ವಿ), ಎಸ್‌ಡಿಎಂನ ಸುನೇಶ್ (ತೃ) ಪ್ರಶಸ್ತಿ ಪಡೆದರು.

ಉತ್ತಮ ಶಾಲಾ ಕ್ಲಬ್ ವಿಭಾಗದಲ್ಲಿ ಇರ್ದೆ ಉಪ್ಪಳಿಗೆ ಸರಕಾರಿ ಪ್ರೌಢಶಾಲೆ ಪ್ರಥಮ, ಬೈಕಂಪಾಡಿ ಬರ್ಟ್ರೆಂಡ್ ರಸ್ಸೆಲ್ ಆಂಗ್ಲಮಾಧ್ಯಮ ಶಾಲೆ ದ್ವಿತೀಯ, ಕೃಷ್ಣಾಪುರ ಅಲ್-ಬದ್ರಿಯ ಆಂಗ್ಲ ಮಾಧ್ಯಮ ಶಾಲೆ ತೃತೀಯ ಸ್ಥಾನ ಪಡೆಯಿತು. ಅರಂತೋಡು ನೆಹರೂ ಸ್ಮಾರಕ ಪ್ರೌಢಶಾಲೆ, ಪಾವೂರು ಸರಕಾರಿ ಪ್ರೌಢಶಾಲೆ ಸಮಾಧಾನಕರ ಬಹುಮಾನ ಪಡೆದುಕೊಂಡವು. ಉತ್ತಮ ಸಂಯೋಜಕ ಶಿಕ್ಷಕ ವಿಭಾಗದಲ್ಲಿ ಉಪ್ಪಳಿಗೆ ಇರ್ದೆ ಸರಕಾರಿ ಪ್ರೌಢಶಾಲೆಯ ಗೀತಾ (ಪ್ರ), ಬರ್ಟ್ರೆಂಡ್ ರಸ್ಸೆಲ್ ಆಂಗ್ಲಮಾಧ್ಯಮ ಶಾಲೆಯ ಕೈರುನ್ನೀಸಾ (ದ್ವಿ), ಅಲ್-ಬದ್ರಿಯಾ ಶಾಲೆಯ ಯಶೋಧಾ (ತೃ), ನೆಹರೂ ಸ್ಮಾರಕ ಪ್ರೌಢಶಾಲೆಯ ಕಿಶೋರ್‌ಕುಮಾರ್, ಪಾವೂರು ಸರಕಾರಿ ಶಾಲೆಯ ಆಶಾ ವಾಸ್ (ಸಮಾಧಾನಕರ) ಬಹುಮಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News