ಸಹಬಾಳ್ವೆ ಉಡುಪಿಯಿಂದ ಮಾ.17ರಂದು ‘ಸರ್ವಜನೋತ್ಸವ’ ಸಮಾವೇಶ

Update: 2019-03-15 11:22 GMT

ಉಡುಪಿ, ಮಾ.15: ಸಂವಿಧಾನವನ್ನು ರಕ್ಷಿಸುವ ಹಾಗೂ ಜಾತ್ಯಾತೀತ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಪರಿಸ್ಥಿತಿಯನ್ನು ಸುಧಾರಿಸುವ ಪ್ರಯತ್ನವಾಗಿ ಸಹಬಾಳ್ವೆ ಉಡುಪಿ ವತಿಯಿಂದ ‘ಸರ್ವಜನೋತ್ಸವ’ ಸಮಾವೇಶವನ್ನು ಮಾ.17ರಂದು ಉಡುಪಿ ಕಲ್ಸಂಕ ಬಳಿಯ ರಾಯಲ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿದೆ.

ಸಹಬಾಳ್ವೆ ಉಡುಪಿಯ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ಈ ಕುರಿತು ಮಾಹಿತಿ ನೀಡಿದರು.

ಮಾನವೀಯತೆಯ ಮೂಲಾಧಾರವಾಗಿರುವ ಸಹಬಾಳ್ವೆ ಸಿದ್ಧಾಂತವನ್ನು ಇತ್ತೀಚಿನ ದಿನಗಳಲ್ಲಿ ಉಡುಪಿ ಸೇರಿದಂತೆ ದೇಶದಾದ್ಯಂತ ತೀರಾ ದುರ್ಬಲಗೊಳಿಸುವ ಷಡ್ಯಂತರ ನಡೆಯುತ್ತಿದೆ. ಇದರ ಪರಿಣಾಮವಾಗಿ ಮಾನವ ಜೀವ ಮತ್ತು ಮನುಷ್ಯನ ಘನತೆಯ ಮೇಲೆ ನಿರಂತರ ಆಕ್ರಮಣ ನಡೆಯುತ್ತಿದೆ ಎಂದು ಹೇಳಿದರು.

ಈ ಸಮಾವೇಶದ ಉದ್ದೇಶ ಸ್ವಾತಂತ್ರ, ಸಮಾನತೆ ಮತ್ತು ಸಹೋದರತ್ವವನ್ನು ಎತ್ತಿ ಹಿಡಿಯುವುದು. ಪ್ರಜಾಪ್ರಭುತ್ವದ ಮೂಲಾಧಾರವಾಗಿರುವ ಭಾರತದ ಸಂವಿಧಾನವನ್ನು ರಕ್ಷಿಸುವುದು. ದೇಶದ ಸರ್ವಧರ್ಮ ಸಮಭಾವ ಹಾಗೂ ಜಾತ್ಯತೀತ ಪರಂಪರೆಯನ್ನು ಉಳಿಸುವುದು. ಮತ, ಧರ್ಮ, ಜಾತಿ, ಭಾಷೆ, ಪ್ರಾಂತ್ಯ, ಪಂಥ ಇತ್ಯಾದಿ ವೈವಿಧ್ಯತೆಗಳ ಜೊತೆ ಜೊತೆಗೆ ದೇಶದ ಅಖಂಡತೆ ಹಾಗೂ ಐಕ್ಯತೆಗಳನ್ನು ಇನ್ನಷ್ಟು ಗಟ್ಟಿಗೊಳಿಸುವುದು ಮತ್ತು ವಿಚ್ಛಿದ್ರಕಾರಿ ಶಕ್ತಿಗಳನ್ನು ಹಿಮ್ಮೆಟ್ಟಿಸಿ ಶಾಂತಿಯನ್ನು ಶಾಶ್ವತಗೊಳಿಸುವುದಾಗಿದೆ ಎಂದು ಹೇಳಿದರು.

ವಿವಿಧ ಸಿದ್ಧಾಂತ, ಸರ್ವಪಕ್ಷ ಹಾಗೂ ಸರ್ವಧರ್ಮೀಯರ ಈ ಸಮಾವೇಶ ದಲ್ಲಿ 20-25ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಈ ಸಮಾವೇಶದ ಮೂಲಕ ಜಿಲ್ಲೆಯ ಸಹಬಾಳ್ವೆ ಹಾಗೂ ಸಹೋದರತೆಯ ವಿರಾಟ್ ಪ್ರದರ್ಶನವನ್ನು ಪ್ರಸ್ತುತ ಪಡಿಸಲಾಗುವುದು ಎಂದು ಅಮೃತ್ ಶೆಣೈ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಹಿರಿಯ ಚಿಂತಕ ಜಿ.ರಾಜಶೇಖರ್, ದಸಂಸ ಮುಖಂಡ ಶ್ಯಾಮ್ ರಾಜ್ ಬಿರ್ತಿ, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಪದಾಧಿಕಾರಿಗಳಾದ ವರೋನಿಕಾ ಕರ್ನೆಲಿಯೋ, ರೋಶಿನಿ ಒಲಿವೇರಾ, ಪ್ರಮೀಳಾ ಜತ್ತನ್ನ, ಜನಾರ್ದನ ಭಂಡಾರ್ಕರ್, ಸ್ಟೀವನ್ ಕುಲಾಸೋ, ಅನಿತಾ ಡಿಸೋಜ, ಖಲೀಲ್ ಕೇರಾಡಿ, ಇದ್ರೀಸ್ ಹೂಡೆ ಮೊದಲಾದವರು ಉಪಸ್ಥಿತರಿದ್ದರು.

ಸಮಾವೇಶದಲ್ಲಿ ಭಾಗವಹಿಸುವ ಗಣ್ಯರು

ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಕಲಬುರ್ಗಿ ಮರುಳಕಂಕರ ದೇವರ ಗುರುಪೀಠದ ಶ್ರೀಸಿದ್ಧಬಸವ ಕಬೀರ ಮಹಾಸ್ವಾಮಿಗಳು, ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಸಿಪಿಎಂ ಮುಖಂಡ ಜಿ.ಎನ್. ನಾಗರಾಜ್, ಜೆಡಿಎಸ್ ಪ್ರಚಾರ ಸಮಿತಿಯ ಅಧ್ಯಕ್ಷ ವೈ.ಎಸ್.ವಿ.ದತ್ತಾ, ಅಂಕಣಕಾರ ಶಿವಸುಂದರ್, ಚಿಂತಕ ದಿನೇಶ್ ಅಮೀನ್ ಮಟ್ಟು, ಸಾಮಾಜಿಕ ಚಿಂತಕ ಮಹೇಂದ್ರ ಕುಮಾರ್, ದಲಿತ ಚಿಂತಕ ಇಂಧೂದರ ಹೊನ್ನಾಪುರ, ಧರ್ಮಗುರು ಚೇತನ್ ಲೋಬೊ, ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ಮಾಜಿ ವಿಧಾನ ಪರಿಷತ್ ಸಭಾಪತಿ ವಿ.ಆರ್. ಸುದರ್ಶನ್ ಭಾಗವಹಿಸಲಿರುವರು.

'ಸಮಾವೇಶಕ್ಕೂ ಚುನಾವಣೆಗೂ ಸಂಬಂಧ ಇಲ್ಲ'

ಸರ್ವಜನೋತ್ಸವ ಸಮಾವೇಶಕ್ಕೂ ರಾಜಕೀಯ ಪಕ್ಷ, ಸರಕಾರ ಹಾಗೂ ಚುನಾವಣೆಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಈ ಸಮಾವೇಶ ಯಾವುದೇ ಪಕ್ಷ ಅಥವಾ ಸಂಘಟನೆಯ ವಿರುದ್ಧ ಅಲ್ಲ ಎಂದು ಅಮೃತ್ ಶೆಣೈ ಸ್ಪಷ್ಟಪಡಿಸಿದರು.

ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಮಾವೇಶಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜಕೀಯ ಮುಖಂಡರು ಈ ಸಮಾ ವೇಶದಲ್ಲಿ ಭಾಗವಹಿಸಲಿರುವರು. ಆದರೆ ಅವರು ತಮ್ಮ ಭಾಷಣದಲ್ಲಿ ಯಾವುದೇ ಪಕ್ಷದ ಪರ ಮತ ಕೇಳುವಾಗೆ ಇಲ್ಲ. ಆ ರೀತಿ ಮಾಡಿದರೆ ಅದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ ಎಂದರು.

ಸಮಾವೇಶಕ್ಕೆ ಸಂಬಂಧಿಸಿದಂತೆ ಈಗಗಾಲೇ ವಿವಿಧ ಕಡೆಗಳಲ್ಲಿ ಅನೇಕ ಪೂರ್ವ ಭಾವಿ ಸಭೆಗಳನ್ನು ನಡೆಸಲಾಗಿದೆ. ಈ ಮೂಲಕ ಎಲ್ಲ ರೀತಿಯ ಸಿದ್ಧತೆ ಗಳನ್ನು ಮಾಡಲಾಗಿದೆ. ದೊಡ್ಡ ಮಟ್ಟ ಪ್ರಚಾರ ಕಾರ್ಯಕ್ರಮಗಳು ನಡೆದಿವೆ ಎಂದು ಅವರು ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News