​ಮಾ.17ರಂದು ಎಸ್‌ಡಿಪಿಐ ಜಿಲ್ಲಾ ಸಮಾವೇಶ

Update: 2019-03-15 12:40 GMT

ಮಂಗಳೂರು, ಮಾ.15: ಲೋಕಸಭಾ ಚುನಾವಣೆಯಲ್ಲಿ ದ.ಕ. ಕ್ಷೇತ್ರದಲ್ಲಿ ಎಸ್‌ಡಿಪಿಐ (ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಇದರ ಅಂಗವಾಗಿ ಬೃಹತ್ ಜಿಲ್ಲಾ ಸಮಾವೇಶ ಮತ್ತು ಅಭ್ಯರ್ಥಿ ಘೋಷಣಾ ಕಾರ್ಯಕ್ರಮವು ಮಾ.17ರಂದು ಸಂಜೆ 4 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ನಡೆಯಲಿದೆ.

ಕೋಮುವಾದಿ ಶಕ್ತಿಗಳನ್ನು ಅಧಿಕಾರದಿಂದ ದೂರ ಇಡಲು ಎಸ್‌ಡಿಪಿಐ ಮುಂದಾಗಲಿದೆ. ಜಾತ್ಯತೀಯ ಎನ್ನಿಸಿಕೊಂಡಿರುವ ಎರಡು ಪಕ್ಷಗಳು ಕೋಮುವಾದವನ್ನು ಎದುರಿಸುವಲ್ಲಿ ವಿಫಲವಾಗಿವೆ. ಎಸ್‌ಡಿಪಿಐನಿಂದ ರಾಜ್ಯದ ಬೆಂಗಳೂರು, ಮಂಗಳೂರು, ಮೈಸೂರು-ಕೊಡಗು, ಬೀದರ್ ಸೇರಿದಂತೆ ಐದು ಕಡೆಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಸಮಾವೇಶಕ್ಕೆ ಉಡುಪಿ ಜಿಲ್ಲೆಯಿಂದಲೂ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದ್ದಾರೆ.

ಸಮಾವೇಶದ ಅಧ್ಯಕ್ಷತೆಯನ್ನು ಪಕ್ಷದ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ವಹಿಸಲಿದ್ದು, ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.

ಮುಖ್ಯಅತಿಥಿಯಾಗಿ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸೋ ಫ್ರಾಂಕೋ, ರಾಜ್ಯ ಘಟಕದ ಅಧ್ಯಕ್ಷ ಇಲ್ಯಾಸ್ ಮುಹಮ್ಮದ್, ಪಿಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುಹಮ್ಮದ್ ಶಾಕೀಬ್, ದಲಿತ ದಮನಿತ ಹೋರಾಟಗಾರ ಬಿ.ಆರ್. ಭಾಸ್ಕರ್ ಪ್ರಸಾದ್, ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ಪುಟ್ನಂಜಯ್ಯ, ಅಡ್ವೊಕೇಟ್ ಮಜೀದ್ ಖಾನ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ಹನ್ನಾನ್, ರಿಯಾಝ್ ಫರಂಗಿಪೇಟೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಅಂಟೋನಿ ಪಿ.ಡಿ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್, ಮುನೀಬ್ ಬೆಂಗ್ರೆ, ಸುಹೈಲ್ ಖಾನ್, ಅಬ್ಬಾಸ್ ಕಿನ್ಯ, ಜಮಾಲ್ ಜೋಕಟ್ಟೆ, ಅಬೂಬಕರ್ ವಾಮಂಜೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News