ಗ್ರಾಹಕು ಎಚ್ಚೆತ್ತುಕೊಂಡರೆ ಉತ್ಪಾದಕರು ಜಾಗೃತರಾಗಲು ಸಾಧ್ಯ: ಸಿ.ವಿ.ಶೋಭಾ

Update: 2019-03-15 12:34 GMT

ಉಡುಪಿ, ಮಾ.15: ಯಾವುದೇ ವಸ್ತುಗಳನ್ನು ಖರೀದಿಸುವಾಗ ಸುರಕ್ಷತೆ, ಬಳಕೆಯನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿ ತಿಳಿದುಕೊಳ್ಳಬೇಕು. ಅದರಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ ಕೂಡಲೇ ವಿತರಕರು, ಮಾರಾಟ ಗಾರರ ವಿರುದ್ಧ ಕಾನೂನು ಹೋರಾಟ ನಡೆಸಬೇಕು. ಈ ಮೂಲಕ ಗ್ರಾಹಕರು ಎಚ್ಚೆತ್ತುಕೊಂಡರೆ ಮಾತ್ರ ಉತ್ಪಾದಕರು ಜಾಗೃತರಾಗಲು ಸಾಧ್ಯವಾಗುತ್ತದೆ ಎಂದು ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸಿ.ವಿ. ಶೋಭಾ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಪಂ, ಆಹಾರ ನಾಗರಿಕೆ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಬಳಕೆದಾರರ ವೇದಿಕೆಯಲ್ಲಿ ಶುಕ್ರವಾರ ಆಯೋಜಿಸಲಾದ ವಿಶ್ವ ಗ್ರಾಹಕರ ದಿನಾಚರಣೆಯಲ್ಲಿ ಅವರು ಮಾತನಾಡುತಿದ್ದರು.

ಇಂದು ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಗ್ರಾಹಕರು ಬಹಳ ಜಾಗೃತ ರಾಗಿರಬೇಕಾಗುತ್ತದೆ. ಗ್ರಾಹಕರ ಸಂರಕ್ಷಣಾ ಕಾಯಿದೆಯಲ್ಲಿ ಗ್ರಾಹಕರ ಹಕ್ಕುಗಳ ಜೊತೆ ಕರ್ತವ್ಯ ಕೂಡ ನೀಡಲಾಗಿದೆ. ಆದುದರಿಂದ ನಾವು ಹಕ್ಕುಗಳ ಜೊತೆ ಜವಾಬ್ದಾರಿಯನ್ನು ಕೂಡ ಸರಿಯಾಗಿ ನಿರ್ವಹಿಸಿದರೆ ಯಾವುದೇ ಸಮಸ್ಯೆ ಆಗು ವುದಿಲ್ಲ ಎಂದರು.

ಅಗತ್ಯ ಇಲ್ಲದ ಅನವಶ್ಯಕ ವಸ್ತುಗಳ ಖರೀದಿಯಿಂದ ಉತ್ಪಾದಕ ಕಂಪೆನಿಗಳು ಗ್ರಾಹಕರನ್ನು ಹೆಚ್ಚು ಹೆಚ್ಚು ಮೋಸಕ್ಕೆ ಒಳಪಡಿಸುತ್ತಿವೆ. ಉತ್ಪಾದಕ ಕಂಪೆನಿಗಳು ಗ್ರಾಹಕರ ಮನಸ್ಥಿತಿಯನ್ನು ಅಧ್ಯಯನ ಮಾಡಿ ಹೊಸ ಹೊಸ ಬಗೆಯ ವಸ್ತು ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ನಾವು ನಮ್ಮ ಮನಸ್ಥಿತಿ ಬದ ಲಾಯಿಸದಿದ್ದರೆ ನಿರಂತರ ಕಂಪೆನಿಯ ಮೋಸಕ್ಕೆ ಒಳಗಾಗುತ್ತಲೇ ಇರುತ್ತೇವೆ ಎಂದು ಅವರು ಹೇಳಿದರು.

ಯಾವುದೇ ವಸ್ತುಗಳಲ್ಲಿ ಗ್ರಾಹಕರಿಗೆ ಹೆಚ್ಚಿನ ಲಾಭ ಇರಬೇಕೆ ಹೊರತು ಉತ್ಪಾದಕರಿಗೆ ಅಥವಾ ಮಧ್ಯವರ್ತಿಗಳಿಗೆ ಅಲ್ಲ. ಆದರೆ ಇಂದು ಬಳಕೆದಾರರಿಗೆ ಯಾವುದೇ ಲಾಭ ಸಿಗುತ್ತಿಲ್ಲ. ಎಲ್ಲವನ್ನು ಉತ್ಪಾದಕರೆ ದೋಚಿಕೊಳ್ಳುತ್ತಿದ್ದಾರೆ. ನಮ್ಮಲ್ಲಿರುವ ಅರಿವಿನ ಕೊರತೆಯಿಂದ ಮೋಸಕ್ಕೆ ಒಳಗಾದರೂ ಯಾವುದೇ ದೂರು ನೀಡಲು ಹೋಗುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಡಾ.ಎಲ್.ನಾಗರಾಜ್ ಕೆ.ಎ.ಎಸ್. ಮಾತನಾಡಿ, ಗ್ರಾಹಕರು ದಿನನಿತ್ಯ ಬಳಕೆ ಮಾಡುವ ವಸ್ತುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಗ್ರಾಹಕರು ಜಾಗೃತರಾದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಡಿ.ಆರ್.ಚೌಗುಲಾ ಆಯ್ದ 10 ಶಾಲೆಗಳ ಗ್ರಾಹಕ ಕ್ಲಬ್‌ಗಳಿಗೆ ಅನುದಾನವನ್ನು ವಿತರಿಸಿದರು. ಅಧ್ಯಕ್ಷತೆಯನ್ನು ಬಳಕೆದಾರರ ವೇದಿಕೆಯ ಸಂಚಾಲಕ ದಾಮೋದರ್ ಐತಾಳ್ ವಹಿಸಿದ್ದರು.

ಬಳಕೆದಾರರ ವೇದಿಕೆಯ ವಿಶ್ವಸ್ಥ ಎಚ್.ಶಾಂತರಾಜ ಐತಾಳ್ ಸ್ವಾಗತಿಸಿ ದರು. ವಿಶ್ವಸ್ಥ ಟಿ.ಚಂದ್ರಶೇಖರ್ ವಂದಿಸಿದರು. ಲಕ್ಷ್ಮೀಬಾಯಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News