ಪರವಾನಿಗೆಗಳೆಲ್ಲವೂ ಅಕ್ರಮ, ವಿಸ್ತರಣೆ ಅಮಾನತು: ಪೀಠದ ತೀರ್ಪು

Update: 2019-03-15 16:36 GMT

► ಯುಪಿಸಿಎಲ್‌ಗೆ ಭಾರೀ ದಂಡ

► ವಿಶೇಷ ಸಮಿತಿಯ ರಚನೆ

► ಉಡುಪಿ ಜಿಲ್ಲೆಯ ಧಾರಣಾ ಸಾಮರ್ಥ್ಯ ಅಧ್ಯಯನಕ್ಕೆ ರಾಜ್ಯಕ್ಕೆ ನಿರ್ದೇಶನ

 ಉಡುಪಿ, ಮಾ.15: ಕಳೆದ ಸುಮಾರು ಎರಡು ದಶಕಗಳಿಂದ ನಂದಿಕೂರು ಜನಜಾಗೃತಿ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯ ಪರಿಸರ ಹೋರಾಟಗಾರರು ಮೊದಲು ನಾಗಾರ್ಜುನ ಪವರ್ ಕಾರ್ಪೋರೇಷನ್ ಲಿಮಿಟೆಡ್ (ಎನ್‌ಪಿಸಿಎಲ್) ಹಾಗೂ ಅದೇ ಹೆಸರು ಬದಲಾವಣೆಗೊಂಡು ಪ್ರಸ್ತುತ ಉಡುಪಿ ಪವರ್ ಕಾರ್ಪೋರೇಷನ್ ಲಿಮಿಟೆಡ್ (ಯುಪಿಸಿಎಲ್) ಎಂದು ಕರೆಸಿಕೊಳ್ಳುತ್ತಿರುವ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಹೊಸದಿಲ್ಲಿಯ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ)ದಲ್ಲಿ ಗುರುವಾರ ಮಹತ್ವದ ಗೆಲುವು ಲಭಿಸಿದೆ.

ಕಳೆದೊಂದು ದಶಕದಿಂದ ಉಡುಪಿ ಜಿಲ್ಲೆಯ ಕಾಪು ತಾಲೂಕು, ಪಡುಬಿದ್ರಿ ಸಮೀಪದ ಎಲ್ಲೂರು ಗ್ರಾಮವನ್ನು ಕೇಂದ್ರೀಕರಿಸಿಕೊಂಡು ಕಾರ್ಯಾಚರಿಸು ತ್ತಿರುವ ಗೌತಮ ಅದಾನಿ ಮಾಲಕತ್ವದ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರಕ್ಕೆ ರಾಷ್ಟ್ರೀಯ ಹಸಿರು ಪೀಠದ ಪ್ರಧಾನ ಬೆಂಚ್ ಬುಧವಾರ ತನ್ನ ತೀರ್ಪನ್ನು ಪ್ರಕಟಿಸುವ ಮೂಲಕ ಬಲವಾದ ಗದಾಪ್ರಹಾರವನ್ನೇ ಮಾಡಿದೆ.

ವಿಶ್ವದಲ್ಲೇ ಅತೀಸೂಕ್ಷ್ಮವಾದ ಪರಿಸರ ಹಾಗೂ ಅಸಂಖ್ಯಾತ ಜೀವವೈವಿದ್ಯತೆ ಯನ್ನು ಹೊಂದಿರುವ ಪಶ್ಚಿಮ ಘಟ್ಟದಲ್ಲಿ ಸಮೀಪದಲ್ಲೇ ಉಷ್ಣ ವಿದ್ಯುತ್ ಸ್ಥಾವರವನ್ನು ಪ್ರಾರಂಭಿಸಲು ಕಂಪೆನಿ ಪಡೆದ ಎಲ್ಲಾ ಪರವಾನಿಗೆಗಳು ಅಕ್ರಮ ಎಂದು ಪೀಠ ತೀರ್ಪು ನೀಡಿದೆ.

ಇದರೊಂದಿಗೆ ಈಗ ಕಾರ್ಯಾಚರಿಸುತ್ತಿರುವ ತಲಾ 600 ಮೆ. ವ್ಯಾಟ್ ಸಾಮರ್ಥ್ಯದ ಎರಡು ಸ್ಥಾವರಗಳ ಜೊತೆಗೆ ತಲಾ 800 ಮೆ. ವ್ಯಾಟ್ ಸಾಮರ್ಥ್ಯದ ಇನ್ನೆರಡು ಸ್ಥಾವರಗಳನ್ನು ಸ್ಥಾಪಿಸಲು (ಯೋಜನೆಯನ್ನು 1200 ಮೆ. ವ್ಯಾ. ನಿಂದ 2800 ಮೆ. ವ್ಯಾ.ಗೆ ವಿಸ್ತರಿಸಲು) 2017ರ ಆ.1ರಂದು ನೀಡಲಾದ ಪರಿಸರ ಇಲಾಖೆಯ ಪರವಾನಿಗೆಯನ್ನು ಪೀಠ ಅಮಾನತುಗೊಳಿಸಿದೆ.

ಮಾಲಿನ್ಯಕಾರರಿಗೆ ದಂಡ

ಯೋಜನೆಯಿಂದ ಎಲ್ಲೂರು ಪರಿಸರದಲ್ಲಿ ಇಷ್ಟು ವರ್ಷ ಆಗಿರುವ ಬೆಳೆ ಹಾಗೂ ಇತರ ಹಾನಿಗಳು, ಪರಿಸರ ಮಾಲಿನ್ಯ ಹಾಗೂ ಒಟ್ಟಾರೆಯಾಗಿರುವ ನಷ್ಟಗಳ ಅಂದಾಜು ಮಾಡಲು ತಜ್ಞರ ಸಮಿತಿಯೊಂದನ್ನು ರಚಿಸುವಂತೆ ತಿಳಿಸಿರುವ ಪೀಠ, ಇವುಗಳಿಗೆಲ್ಲ ‘ಮಾಲಿನ್ಯಕಾರರೇ ದಂಡ’ ತೆರುವಂತೆ ಸೂಚಿಸಿದೆ.

ಯುಪಿಸಿಎಲ್‌ನಿಂದ ಪರಿಸರದಲ್ಲಿ ಆಗಿರುವ ನಷ್ಟದ ಅಂದಾಜು ಮಾಡಲಿರುವ ‘ಸಿಪಿಸಿಬಿ’ಗೆ ಮಧ್ಯಂತರ ಪರಿಸರ ಪರಿಹಾರಾರ್ಥವಾಗಿ ಐದು ಕೋಟಿ ರೂ.ಗಳನ್ನು ಪಾವತಿಸುವಂತೆ ಪೀಠ ಅದಾನಿ ಕಂಪೆನಿಗೆ ಆದೇಶಿಸಿದೆ. ಇದರೊಂದಿಗೆ ಅರ್ಜಿದಾರರಿಗೆ (ನಂದಿಕೂರು ಜನಜಾಗೃತಿ ಸಮಿತಿ) ದಾವಾ ಖರ್ಚಿನ ಬಾಬ್ತು ಒಂದು ಲಕ್ಷ ರೂ.ಗಳನ್ನು ಪಾವತಿಸುವಂತೆಯೂ ಪೀಠ ಯುಪಿಸಿಎಲ್‌ಗೆ ನಿರ್ದೇಶಿಸಿದೆ.

ಪೀಠ ಕಳವಳ

ಯೋಜನೆ ಕುರಿತು ಗ್ರಾಮಸ್ಥರು ಹಾಗೂ ಅರ್ಜಿದಾರರು ಎತ್ತಿದ ಪ್ರಾಮಾಣಿಕವಾದ ಗಂಭೀರ ವಿಷಯಗಳ ಕುರಿತು ಸರಕಾರವೂ ಸೇರಿದಂತೆ ಸಂಬಂಧಿತರು ಯಾವುದೇ ಗಮನ ಹರಿಸದಿರುವ ಬಗ್ಗೆ ಟ್ರಿಬ್ಯೂನಲ್ ತನ್ನ ಕಳವಳ ವ್ಯಕ್ತಪಡಿಸಿದೆ. ಯೋಜನೆಯ ವಿರುದ್ಧ ಆರಂಭದಿಂದಲೂ ಹೂಡಲಾಗಿರುವ ದಾವೆ ಹಾಗೂ ವಿವಾದಗಳ ಗಾತ್ರವನ್ನು ನೋಡಿದಾಗ ಇಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಗೊತ್ತಾಗುತ್ತದೆ ಎಂದು ಅದು ಹೇಳಿದೆ.

ಉಷ್ಣ ವಿದ್ಯುತ್ ಯೋಜನೆಗೆ 1997ರ ಮಾ.20ರಂದು ನೀಡಲಾಗಿರುವ ಪರಿಸರಕ್ಕೆ ಸಂಬಂಧಿಸಿದ ಪರವಾನಿಗೆ ನೀಡುವ ವೇಳೆ ಈ ವಿಷಯದಲ್ಲಿ ಅನುಸರಿಸಲೇಬೇಕಾದ ಶಾಸನಬದ್ಧ ಹಾಗೂ ಕಡ್ಡಾಯ ಕ್ರಮಗಳನ್ನು ಅನುಸರಿಸಿರಲಿಲ್ಲ. ಪರವಾನಿಗೆಯ ಸಿಂಧುತ್ವದ ಅವಧಿಯನ್ನು (5ವರ್ಷ) ಕಂಪೆನಿಯ ಕೋರಿಕೆಯಂತೆ ವಿಸ್ತರಿಸಲಾಗಿದೆ. ಇದಕ್ಕೆ ಕಾನೂನಿನಲ್ಲಿ ಯಾವುದೇ ಅವಕಾಶಗಳಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

2004ರಲ್ಲೂ ಯೋಜನೆಯ ಕೆಲಸ ಪ್ರಾರಂಭಗೊಳ್ಳದೇ ಇದ್ದಾಗ ಅದೇ ಅ. 5ರಂದು ಸಚಿವಾಲಯ ಪರಿಸರ ಸಂಬಂಧಿ ಪರವಾನಿಗೆಯನ್ನು ರದ್ದುಪಡಿಸಿದ್ದರೂ ಯೋಜನೆಯ ಪ್ರತಿಪಾದಕರು(ಕಂಪೆನಿ) ಪ್ರಶ್ನಾರ್ಹ ಸನ್ನಿವೇಶದಲ್ಲಿ ಮಾಡಿಕೊಂಡ ಕೋರಿಕೆಯಂತೆ ಸಚಿವಾಲಯದ ನಿರ್ದೇಶಕರು 2005ರ ಜ. 31ರಂದು ವೈಯಕ್ತಿಕ ಪತ್ರ ಬರೆದು ಈ ಆದೇಶವನ್ನು ರದ್ದುಪಡಿಸಿದ್ದರು ಎಂದು ಹಸಿರು ಪೀಠ ತನ್ನ ತೀರ್ಪನಲ್ಲಿ ಹೇಳಿದೆ ಎಂದು ನಂದಿಕೂರು ಜನಜಾಗೃತಿ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ಐಐಎಸ್ಸಿಯ ವಿಜ್ಞಾನಿಗಳು ಹಾಗೂ ತಜ್ಞರ ತಂಡವೊಂದು 2012ರಲ್ಲಿ ಯೋಜನಾ ಪ್ರದೇಶದ ಸುತ್ತಮುತ್ತ ಉಷ್ಣ ವಿದ್ಯುತ್ ಸ್ಥಾವರದಿಂದ ಇಲ್ಲಿನ ಪರಿಸರ ಹಾಗೂ ಜನರ ಬದುಕಿನ ಮೇಲೆ ಬೀರಿರುವ ಪರಿಣಾಮಗಳ ಕುರಿತು ಕ್ಷೇತ್ರಾಧ್ಯಯನ ನಡೆಸಿ ನೀಡಿದ ವರದಿಯನ್ನು ಹಸಿರು ಪೀಠ ಗಂಭೀರ ವಾಗಿ ಪರಿಗಣಿಸಿದೆ. ವರದಿಯಲ್ಲಿ ಪರಿಸರಕ್ಕೆ ಸಂಬಂಧಿಸಿದಂತೆ ಕಂಪೆನಿಯ ಅವ್ಯವಸ್ಥೆಯಿಂದ ಕುಡಿಯುವ ನೀರು, ಜಲಮೂಲಗಳೆಲ್ಲವೂ ಮಾಲಿನ್ಯಕಾರಕ ವಾಗಿದ್ದು, ಮಣ್ಣು ಹಾಗೂ ವಾಯು ಮಾಲಿನ್ಯದೊಂದಿಗೆ, ಜೀವಜಂತುಗಳಿೂ ಮಾರಕವಾಗಿದೆ ಎಂದು ಹೇಳಿತ್ತು.

ಮಾಲಿನ್ಯದಿಂದ ಜನರ ಬದುಕಿನ ಜೀವಸೆಲೆಯಾದ ಭತ್ತ, ಮಲ್ಲಿಗೆ ಬೆಳೆ, ತೋಟಗಾರಿಕಾ ಬೆಳೆಗಳು ನಾಶವಾಗಿದ್ದು, ದನಕರುಗಳು ಸೇರಿದಂತೆ ಸಾಕುಪ್ರಾಣಿ, ಪಕ್ಷಗಳ ವಂಶಾಭಿವೃದ್ಧಿ ಸಾಮರ್ಥ್ಯವೇ ಕುಂದಿವೆ. ಜನರೂ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಹಲವು ರೋಗಗಳಿಂದ ಬಾಧಿಕರಾಗಿದ್ದಾರೆ ಎಂದೂ ವರದಿ ಸೂಚಿಸಿತ್ತು.

ಇವುಗಳೆಲ್ಲವನ್ನೂ ಪರಿಗಣಿಸಿ, ಇಲ್ಲಿನ ಯೋಜನೆಯನ್ನೇ ರದ್ದುಪಡಿಸಿ, ಪರಿಸರ ಹಾಗೂ ಪ್ರದೇಶಗಳಲ್ಲಿ ಹಿಂದಿನ ಸ್ಥಿತಿಯನ್ನು ತರುವಂತೆ ಆದೇಶವನ್ನು ನೀಡಬಹುದಾದರೂ, ಈಗಾಗಲೇ ಸಂದಿರುವ ಕಾಲವನ್ನು ಪರಿಗಣಿಸಿ, ಬದಲಾದ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡಾಗ ಇಂಥ ಆದೇಶದಿಂದ ಇಲ್ಲಿನ ಜನರ ಹಿತಾಸಕ್ತಿಗೆ ಯಾವುದೇ ಪ್ರಯೋಜನವಾಗಲಾರದು. ಈಗ ಅಗತ್ಯವಿರುವುದೇನಂದರೆ, ಜನರಿಗೆ ಈಗಾಗಲೇ ಆಗಿರುವ ತೊಂದರೆಯನ್ನು ಇನ್ನಷ್ಟು ಹೆಚ್ಚಿಸದೇ, ಸ್ಥಾವರಗಳು ಪರಿಸರ ಸಂಬಂಧಿ ಎಲ್ಲಾ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಕಾರ್ಯಾಚರಿಸುವಂತೆ ನೋಡಿಕೊಳ್ಳುವುದು. ಇದರಿಂದ ನಾವು ‘ಮಾಲಿನ್ಯಕಾರರು ದಂಡ ಪಾವತಿಸುವ’ 2010ರ ಎನ್‌ಜಿಟಿ ಆ್ಯಕ್ಟ್‌ನ ಸೆಕ್ಷನ್ 20ನ್ನು ಜಾರಿಗೊಳಿಸುತ್ತೇವೆ. ಇದರಂತೆ ಯೋಜನೆಯ ಪ್ರತಿಪಾದಕರಾದ ಯುಪಿಸಿಎಲ್ ಕಂಪೆನಿ ಪರಿಸರ ಪರಿಹಾರ ದಂಡವನ್ನು ಪಾವತಿಸಬೇಕಾಗುತ್ತದೆ. ಇದಕ್ಕಾಗಿ ತಜ್ಞರ ಸಮಿತಿಯೊಂದನ್ನು ಪೀಠ ರಚಿಸಿದೆ.
ಈ ಸಮಿತಿಯಲ್ಲಿ ಸಿಪಿಸಿಬಿಯ ಹಿರಿಯ ವಿಜ್ಞಾನಿ, ಐಐಟಿ ಚೆನ್ನೈನ ಹಿರಿಯ ಪ್ರತಿನಿಧಿ, ಐಐಎಸ್ಸಿಯ ಹಿರಿಯ ವಿಜ್ಞಾನಿಗಳಿದ್ದು, ಸಿಪಿಸಿಬಿ ಇದರ ನೋಡೆಲ್ ಎಜೆನ್ಸಿಯಾಗಿರುತ್ತದೆ ಎಂದು ಪೀಠ ಹೇಳಿದೆ.

ಯೋಜನೆಯ ವಿರುದ್ಧ ಜನಜಾಗೃತಿ ಸಮಿತಿ 2004ರಲ್ಲೇ ಹೊಸದಿಲ್ಲಿಯ ಎನ್‌ಇಎಎಗೆ ದೂರು ನೀಡಿತ್ತು. ಈ ದೂರನ್ನು ತಳ್ಳಿಹಾಕಲಾಗಿತ್ತು. ಬಳಿಕ ಸಮಿತಿ 2005ರಲ್ಲಿ ಕರ್ನಾಟಕ ಹೈಕೋರ್ಟ್‌ಗೆ ದೂರು ನೀಡಿತ್ತು. ಬಳಿಕ 2012ರಲ್ಲಿ ಈ ದಾವೆಯನ್ನು ಸುಪ್ರೀಂ ಕೋರ್ಟಿನ ಆದೇಶದಂತೆ ಚೆನ್ನೈನ ಹಸಿರು ಪೀಠಕ್ಕೆ ವರ್ಗಾಯಿಸಲಾಗಿತ್ತು. ಚೆನ್ನೈ ಪೀಠದಲ್ಲಿ ನ್ಯಾಯಾಧೀಶರ ಕೊರತೆಯ ಕಾರಣ ಕೇಸನ್ನು ಕೊನೆಗೂ ಹೊಸದಿಲ್ಲಿಯ ಪ್ರಧಾನ ಪೀಠಕ್ಕೆ ವರ್ಗಾಯಿಸಲಾಗಿತ್ತು ಎಂದು ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.

ಕರ್ನಾಟಕ ಸರಕಾರಕ್ಕೆ ಯುಪಿಸಿಎಲ್ ಸ್ಥಾವರದಿಂದ ವಿದ್ಯುತ್ ಖರೀದಿಸಬೇಕಾದ ಅಗತ್ಯವೇ ಇಲ್ಲ. ನಿಜ ಹೇಳಬೇಕೆಂದರೆ ಅದು ಯುಪಿಸಿಎಲ್‌ನಿಂದ ವಿದ್ಯುತ್ ಖರೀದಿಯನ್ನು ನಿಲ್ಲಿಸಿದೇ ಅಥವಾ ಗಣನೀಯವಾಗಿ ಕಡಿಮೆ ಮಾಡಿದೆ. ರಾಜ್ಯ ವಿದ್ಯುತ್ ಇಲಾಖೆಯ ವೆಬ್‌ಸೈಟ್‌ನಲ್ಲಿ ನೀಡಲಾಗಿರುವ ಅಂಕಿ ಅಂಶಗಳಂತೆ 2018ರ ಜು.31ಕ್ಕೆ ರಾಜ್ಯದಲ್ಲಿ ವಿವಿಧ ಮೂಲಗಳಿಂದ ಉತ್ಪಾದನೆಯಾಗಿರುವ ವಿದ್ಯುತ್ ಪ್ರಮಾಣ 27,176.43 ಮೆ.ವ್ಯಾಟ್‌ಗೆ ಏರಿದೆ.

ಇದರಲ್ಲಿ 4,713.26ಮೆ.ವ್ಯಾ.ನ್ನು ಗಾಳಿವಿದ್ಯುತ್‌ನಿಂದ, 5,172.72 ಮೆ.ವ್ಯಾನ್ನು ಸೌರವಿದ್ಯುತ್‌ನಿಂದ ಪಡೆಯಲಾಗಿದೆ. ರಾಜ್ಯದಲ್ಲಿ ಲಭ್ಯವಿರುವ ನವೀಕರಿಸಬಹುದಾದ ಒಟ್ಟು ವಿದ್ಯುತ್ 86,792.792 ಮೆ.ವ್ಯಾಟ್. ಇದರಲ್ಲಿ ಗಾಳಿವಿದ್ಯುತ್ ಪ್ರಮಾಣ 55,857ಮೆ.ವ್ಯಾ. ಆದರೆ, ಸೌರವಿದ್ಯುತ್ 24,700 ಮೆ.ವ್ಯಾ. ಇಷ್ಟೊಂದು ವಿದ್ಯುತ್ ಸುಲಭದಲ್ಲಿ ಲಭ್ಯವಿರುವಾಗ ಪರಿಸರ ಮತ್ತು ಜನಕ್ಕೆ ಮಾರಕವಾಗಿರುವ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಉಡುಪಿಯಂಥ ಪರಿಸರ ಸೂಕ್ಷ ಪ್ರದೇಶದಲ್ಲಿ ಅಗತ್ಯವಿಲ್ಲ ಎಂದು ಬಾಲಕೃಷ್ಣ ಶೆಟ್ಟಿ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News