​ಬಾಗಲಕೋಟೆ ಮೂಲದ ಯುವಕನ ಕೊಲೆ ಪ್ರಕರಣ: ಮೂರು ವರ್ಷ ಕಠಿಣ ಶಿಕ್ಷೆ

Update: 2019-03-15 14:55 GMT

ಮಂಗಳೂರು, ಮಾ.15: ಮೂರು ವರ್ಷಗಳ ಹಿಂದೆ ಮೂಡುಬಿದಿರೆಯ ಬೆಳುವಾಯಿ ಗ್ರಾಮದ ಪುಂಚರಬೆಟ್ಟು ಎಂಬಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು ದಮ್ಮೂರಿನ ಶಿವಪ್ಪ ಚಲವಾದಿ (30) ಅವರನ್ನು ಹೊಡೆದು ಕೊಲೆ ಮಾಡಿದ ಪ್ರಕರಣದ ಓರ್ವ ಆರೋಪಿಗೆ ಮಂಗಳೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮೂರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

ಬಾಗಲಕೋಟೆ ಹುನಗುಂದ ನಿವಾಸಿ ಕುಮಾರ (25) ಶಿಕ್ಷೆಗೊಳಗಾದವರು.

ಪ್ರಕರಣ ವಿವರ: ಪುಂಚರಬೆಟ್ಟು ಕಲ್ಲಿನ ಕೋರೆಯಲ್ಲಿ ಕೆಲಸ ಮಾಡುತಿದ್ದ ಶಿವಪ್ಪ ಚಲವಾದಿ ಅವರನ್ನು 2016ರ ಫೆ.14ರಂದು ರಾತ್ರಿ ಅವರ ಜತೆಗಿದ್ದವರೇ ಮರದ ದೊಣ್ಣೆಯಿಂದ ಮತ್ತು ಕೈಯಿಂದ ಹೊಡೆದು ಬಳಿಕ ತುಳಿದು ಕೊಲೆ ಮಾಡಿದ್ದರು. ಬಾಗಲಕೋಟೆಯ ರಂಗಪ್ಪ ನಾಯ್ಕರ್ ಯಾನೆ ಉಮೇಶ್, ಕುಮಾರ ಮತ್ತು ಅಪ್ರಾಪ್ತ ವಯಸ್ಸಿನ ಬಾಲಕ ಈ ಕೊಲೆ ಪ್ರಕರಣದ ಆರೋಪಿಗಳೆಂದು ಹೆಸರಿಸಲಾಗಿದ್ದು, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

ಕೊಲೆಗೆ ಕಾರಣ: ಕೊಲೆಯಾದ ಶಿವಪ್ಪ ಚಲವಾದಿ ಮತ್ತು ಮೂವರು ಆರೋಪಿಗಳು ಹಾಗೂ ಅಪ್ರಾಪ್ತ ವಯಸ್ಸಿನ ಬಾಲಾರೋಪಿಯ ತಂದೆ ಮಂಗಳಪ್ಪ ಅವರು ಪುಂಚರಬೆಟ್ಟು ಕಲ್ಲಿನಕೋರೆಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿನ ಶೆಡ್ ಒಂದರಲ್ಲಿ ವಾಸಿಸುತ್ತಿದ್ದರು. ಮೃತ ಶಿವಪ್ಪ ಅವರು ಕೊಲೆಯಾಗುವುದಕ್ಕೆ ಮೊದಲು ಸುಮಾರು 15 ದಿನಗಳಿಂದ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ; ಆದರೆ ದಿನ ಕಳೆಯಲು ಉಳಿದವರ ಜತೆ ಹಣ ಕೇಳುತ್ತಿದ್ದರು ಹಾಗೂ ಹಣ ಕೊಡದಿದ್ದರೆ ಜಗಳ ಮಾಡುತ್ತಿದ್ದರು. 2016ರ ಫೆ.14ರಂದು ಮಧ್ಯಾಹ್ನ ಶಿವಪ್ಪ ಅವರು ಮಂಗಳಪ್ಪ ಅವರ ಜತೆ ಜಗಳ ಮಾಡಿ ಹಲ್ಲೆ ಮಾಡಿದ್ದನು. ಈ ವಿಷಯವನ್ನು ಮಂಗಳಪ್ಪ ಅವರು ತನ್ನ ಜತೆಗಿದ್ದವರಿಗೆ ತಿಳಿಸಿದ್ದರು. ರಾತ್ರಿ 10 ಗಂಟೆ ವೇಳೆಗೆ ಮಂಗಳಪ್ಪ ಅವರಿಗೆ ಹೊಡೆದ ಬಗ್ಗೆ ಎಲ್ಲರೂ ಸೇರಿ ಶಿವಪ್ಪ ಅವರನ್ನು ಪ್ರಶ್ನಿಸಿದ್ದರು. ಆಗ ಶಿವಪ್ಪ ಜಗಳಕ್ಕೆ ಮುಂದಾಗಿದ್ದನು. ಇದರಿಂದ ಕೋಪಗೊಂಡ ರಂಗಪ್ಪ, ಕುಮಾರ ಮತ್ತು ಅಪ್ರಾಪ್ತ ವಯಸ್ಸಿನ ಬಾಲಕ ಸೇರಿಕೊಂಡು ಶಿವಪ್ಪ ಅವರನ್ನು ಮರದ ದೊಣ್ಣೆ ಮತ್ತು ಕೈಯಿಂದ ಹೊಡೆದು ಬಳಿಕ ತುಳಿದಿದ್ದರು. ಮರಣಾಂತಿಕ ಗಾಯಗೊಂಡಿದ್ದ ಶಿವಪ್ಪ ಸಾವನ್ನಪ್ಪಿದ್ದನು.
ಶಿವಪ್ಪ ಕೊಲೆಯಾದ ಬಗ್ಗೆ ಮರುದಿನ (ಫೆ.15) ವಿಷಯ ಗೊತ್ತಾಗಿದ್ದು, ಮೂಡುಬಿದಿರೆ ಠಾಣೆಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಬಾಲಾರೋಪಿ ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಠಾಣೆಯ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಮಂಗಳೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲನಗೌಡ ಅವರು ಆರೋಪಿ ಕುಮಾರನಿಗೆ ಮೂರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಮಾ.13ರಂದು ತೀರ್ಪು ನೀಡಿದ್ದಾರೆ.

ಮೂರು ವರ್ಷಗಳ ಹಿಂದೆ ಇದೊಂದು ಕೊಲೆ ಪ್ರಕರಣವೆಂದು (ಐಪಿಸಿ ಸೆ.302) ದಾಖಲಾಗಿದ್ದರೂ ನ್ಯಾಯಾಧೀಶರು 23 ಸಾಕ್ಷಿಗಳ ವಿಚಾರಣೆಯನ್ನು ನಡೆಸಿ ಇದೊಂದು ಕೊಲೆಯಲ್ಲದ ಮಾನವ ಹತ್ಯೆ ಪ್ರಕರಣ (ಐಪಿಸಿ 304) ಎಂಬುದಾಗಿ ತೀರ್ಮಾನಕ್ಕೆ ಬಂದು ಈ ತೀರ್ಪು ನೀಡಿದ್ದಾರೆ. ಮೃತ ಶಿವಪ್ಪ ಅವರಿಗೆ ಪತ್ನಿ ಮತ್ತು ಪುತ್ರ ಇದ್ದು, ಅವರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಸರಕಾರದಿಂದ ಸೂಕ್ತ ಪರಿಹಾರ ಕೊಡಿಸಬೇಕೆಂದು ನ್ಯಾಯಾಧೀಶರು ಆದೇಶಿಸಿದ್ದಾರೆ.

ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿಶ್ಚಂದ್ರ ಉದ್ಯಾವರ ವಾದ ಮಂಡಿಸಿದ್ದರು.

ಅಪ್ರಾಪ್ತನ ಪ್ರತ್ಯೇಕ ವಿಚಾರಣೆ

ಪ್ರಕರಣದ ಒಂದನೇ ಆರೋಪಿ ರಂಗಪ್ಪ ನಾಯ್ಕರ್ ಯಾನೆ ಉಮೇಶ್ ಜಾಮೀನಿನಲ್ಲಿ ಬಿಡುಗಡೆಯಾದ ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಇನ್ನೂ ಪತ್ತೆಯಾಗಿಲ್ಲ. 3ನೇ ಆರೋಪಿ ಅಪ್ರಾಪ್ತ ವಯಸ್ಸಿನ ಬಾಲಕನ ಆರೋಪದ ಬಗ್ಗೆ ಪ್ರತ್ಯೇಕ ವಿಚಾರಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News