ಉಡುಪಿ: ಮಾ.17ರಂದು ಕುವೆಂಪುರ ‘ಶ್ರೀರಾಮಾಯಣ ದರ್ಶನಂ’ ನಾಟಕ

Update: 2019-03-15 15:22 GMT

ಉಡುಪಿ, ಮಾ.15: ರಾಷ್ಟ್ರಕವಿ ಕುವೆಂಪು ಅವರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ‘ಶ್ರೀ ರಾಮಾಯಣ ದರ್ಶನಂ’ ಮಹಾ ಕಾವ್ಯದ ರಂಗಪ್ರಯೋಗವನ್ನು ಮೈಸೂರಿನ ರಂಗಾಯಣದ ಕಲಾವಿದರು ಇದೇ ಮಾ.17ರ ರವಿವಾರ ಸಂಜೆ 6:00ರಿಂದ ಉಡುಪಿ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಅಭಿವ್ಯಕ್ತಿಗೊಳಿಸಲಿದ್ದಾರೆ.

ಉಡುಪಿಯ ರಂಗಭೂಮಿ ಸಂಸ್ಥೆಯ ಆಶ್ರಯದಲ್ಲಿ, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಎಂಜಿಎಂ ಕಾಲೇಜುಗಳ ಸಹಯೋಗದಲ್ಲಿ ಈ ನಾಟಕವನ್ನು ಆಯೋಜಿಸಲಾಗಿದೆ ಎಂದು ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಶ್ರೀರಾಮಾಯಣದರ್ಶನಂ ಐದು ಗಂಟೆಗಳ ದೀರ್ಘ ನಾಟಕವಾಗಿದ್ದು, ನಾಟಕದ ನಡುವೆ ಕೆಲವು ನಿಮಿಷಗಳ ವಿರಾಮವಿರುತ್ತದೆ. ರಂಗ ನಿರ್ದೇಶಕ ಕೆ.ಜಿ.ಮಹಾಬಲೇಶ್ವರ್ ನಾಟಕವನ್ನು ನಿರ್ದೇಶಿಸಿದ್ದು, ರಂಗಾಯಣ ಮೈಸೂರಿನ 55 ಮಂದಿ ಹಿರಿಯ, ಕಿರಿಯ ನಟನಟಿಯರು ಇದರಲ್ಲಿ ಅಭಿನಯಿಸಲಿದ್ದಾರೆ ಎಂದವರು ವಿವರಿಸಿದ್ದಾರೆ.

ಈಗಾಗಲೇ ರಾಜ್ಯದ ಹಲವೆಡೆ ಪ್ರಯೋಗಗೊಂಡು ಜನಮನ ಗೆದ್ದಿರುವ ಶ್ರೀರಾಮಾಯಣದರ್ಶನಂ ಮಹಾಕಾವ್ಯ-ನಾಟಕ ಪ್ರದರ್ಶನದ ಸದುಪಯೋಗ ವನ್ನು ಕಲಾಭಿಮಾನಿಗಳು ಪಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿಯ ಉಪಾಧ್ಯಕ್ಷ ನಂದಕುಮಾರ್ ಎಂ., ಜತೆ ಕಾರ್ಯದರ್ಶಿ ರವಿರಾಜ್ ಎಚ್.ಪಿ., ಭಾಸ್ಕರ್‌ರಾವ್ ಕಿದಿಯೂರು, ಸದಸ್ಯರಾದ ಮೇಟಿ ಮುದಿಯಪ್ಪ, ಶ್ರೀಪಾದ ಹೆಗಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News