ಕುಡಿಯುವ ನೀರಿನ ಸಮಸ್ಯೆ: ನೀತಿ ಸಂಹಿತೆಯ ನೆಪವೊಡ್ಡಿ ದೂರು ಸ್ವೀಕರಿಸದ ಪಿಡಿಒ

Update: 2019-03-15 16:13 GMT

ಬಂಟ್ವಾಳ, ಮಾ. 15: ಕುಡಿಯುವ ನೀರು ಸಹಿತ ಮೂಲಭೂತ ಸೌಕರ್ಯ ಒದಗಿಸಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗದಿದ್ದರೂ, ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲಕ್ಷ್ಮಿಪಲ್ಕೆ ಎಂಬಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಿತ್ತಿದ್ದು, ಈ ಬಗ್ಗೆ ದೂರು ಕೊಡಲು ಹೋದಾಗ ಪಿಡಿಒ ನೀತಿ ಸಂಹಿತೆಯ ನೆಪವೊಡ್ಡಿ ದೂರು ಸ್ವೀಕರಿಸದೆ ವಾಪಾಸು ಕಳುಹಿಸಿದ್ದಾರೆಂಬ ಆರೋಪ ವ್ಯಕ್ತವಾಗಿದೆ.

ಸರಪಾಡಿ ಗ್ರಾಮದ 4ನೆ ವಾರ್ಡ್ ಸರಪಾಡಿ ಶಾಲಾ ಬಳಿಯ ಅಂಬೇಡ್ಕರ್ ಕಾಲನಿ ಸಹಿತ ಲಕ್ಮಿಪಲ್ಕೆ ಪರಿಸರದಲ್ಲಿ ಕೆಲ ದಿನಗಳಿಂದ ನೀರಿನ ಸಮಸ್ಯೆ ಉಂಟಾಗಿದೆ ಎಂದು ಪಂಚಾಯತ್ ಸದಸ್ಯ ಆದಂ ಕುಂಞಿ ದೂರಿದ್ದಾರೆ. ಈ ಭಾಗದಲ್ಲಿ ಸುಮಾರು 45 ಮನೆಗಳು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಶಾಲಾ ಬಳಿರುವ ಬೋರ್‍ವೆಲ್‍ನಲ್ಲಿ ನೀರಿಲ್ಲದಿದ್ದು, ಇದರ ಪಕ್ಕವೇ ಮತ್ತೊಂದು ಬೋರ್‍ವೆಲ್ ಕೊರೆಯಲು ಪಿಡಿಒರವರು ನಿರಾಪೇಕ್ಷಣಾ ಪತ್ರ ನೀಡಿರುವುದೇ ಇಲ್ಲಿ ನೀರಿನ ಸಮಸ್ಯೆ ಉಂಟಾಗಲು ಕಾರಣ ಎಂದು ಸದಸ್ಯ ಆದಂ ಕುಂಞಿ ಆರೋಪಿಸಿದ್ದಾರೆ.

ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಪಿಡಿಒರವರಿಗೆ ನೀರಿನ ಸಮಸ್ಯೆ ಪರಿಹರಿಸುವಂತೆ ಶುಕ್ರವಾರ ಮನವಿ ಸಲ್ಲಿಸಲು ತೆರಳಿದಾಗ ಅವರು ಚುನಾವಣಾ ನೀತಿ ಸಂಹಿತೆಯ ನೆಪದಲ್ಲಿ ಮನವಿ ಸ್ವೀಕರಿಸದೆ ಅಗೌರವ ತೋರಿದ್ದಾರೆಂದು ಆದಂ ಕುಂಞಿ  ಆರೋಪಿಸಿದ್ದಾರೆ.

ಮುಂದಿನ ಏಳು ದಿನದೊಳಗೆ ಇಲ್ಲಿಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದಲ್ಲಿ ತಾಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದು ತಾಪಂ ಕಾರ್ಯ ನಿರ್ವಹಣಾಧಿಕಾರಿವರಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೂ ಮನವಿಯ ಪ್ರತಿ ರವಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News