ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಸ್ಪೂರ್ತಿ ಸಂಸ್ಥೆಯ ಕೇಶವ ಕೋಟೇಶ್ವರ ಸಹಿತ ಇಬ್ಬರ ಬಂಧನ

Update: 2019-03-15 17:59 GMT

ಉಡುಪಿ, ಮಾ.15: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಕುಂದಾಪುರ ತಾಲೂಕಿನ ಕೆದೂರು ಬೇಳೂರು ಸ್ಪೂರ್ತಿಧಾಮದ ಮುಖ್ಯಸ್ಥ ಕೇಶವ ಕೋಟೇಶ್ವರ (50) ಸಹಿತ ಇಬ್ಬರನ್ನು ಉಡುಪಿ ಮಹಿಳಾ ಠಾಣೆಯ ಪೊಲೀಸರು ಪೋಕ್ಸೊ ಕಾಯಿದೆಯಡಿ ಬಂಧಿಸಿದ್ದಾರೆ.

ಇನ್ನೋರ್ವ ಆರೋಪಿ ಕುಂದಾಪುರ ಕೊರ್ಗಿಯ ಹನುಮಂತ(28) ಎಂದು ಗುರುತಿಸಲಾಗಿದೆ. ಸಂಸ್ಥೆಯ ಅರ್ಹ ಮಕ್ಕಳ ಕೇಂದ್ರದಲ್ಲಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯರು ಉಡುಪಿ ಮಹಿಳಾ ಠಾಣೆಗೆ ನೀಡಿದ ದೂರಿಂತೆ ಆರೋಪಿಗಳನ್ನು ಬಂಧಿಸಲಾಗಿದೆ.

ಇವರಲ್ಲಿ ಹನುಮಂತ ವಿರುದ್ಧ ಎರಡು ಹಾಗೂ ಕೇಶವ ಕೋಟೇಶ್ವರ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ. ಇವುಗಳ ಪೈಕಿ ಒಂದು ಪ್ರಕರಣದಲ್ಲಿ ಇವರಿ ಬ್ಬರು ಆರೋಪಿಗಳಾಗಿದ್ದಾರೆ. ಪೊಲೀಸರು ಗುರುವಾರ ನಸುಕಿನ ವೇಳೆ ಸಂಸ್ಥೆಗೆ ದಾಳಿ ನಡೆಸಿ ಕೇಶವ ಕೋಟೇಶ್ವರನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿ ಬಂಧಿಸಿದ್ದರು. ಅದೇ ದಿನ ಹನುಮಂತನನ್ನು ಕೂಡ ಪೊಲೀಸರು ಬಂಧಿಸಿದ್ದರು.

ಕೇಶವ ಕೋಟೇಶ್ವರನನ್ನು ಮಾ.14ರಂದು ರಾತ್ರಿ ವೇಳೆ ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ನಿವಾಸ ಮುಂದೆ ಹಾಜರು ಪಡಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹನುಮಂತನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸ್ಪೂರ್ತಿಧಾಮದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವ ಕುರಿತು 2016ರಲ್ಲಿ ಸರಕಾರಕ್ಕೆ ಸಲ್ಲಿಕೆಯಾದ ದೂರಿನ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಲು ಉಡುಪಿ ಜಿಲ್ಲಾಡಳಿತ ಅಧಿಕಾರಿಗಳ ತಂಡವನ್ನು ರಚಿಸಿತ್ತು. ತನಿಖೆಯಿಂದ ಸಂಸ್ಥೆಯ ಮೇಲಿನ ಆರೋಪಗಳು ಸಾಬೀತಾಗಿರುವುದರಿಂದ ಸಂಸ್ಥೆಯ ಪರವಾನಿಗೆಯನ್ನು ರದ್ದು ಪಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸರಕಾರ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News